ಎಲ್ಲೇ ಇರು ಆರಾಮಿರು...

28KWR3
Published on

ಕಾರವಾರ: ಮಗನೇ ಮನೆಗೆ ಮಾರಿಯಾಗುವ ಪರಿಸ್ಥಿತಿ ಬಂದಿದೆ. ‘ನೀನು ಎಲ್ಲೇ ಇರು ಆರಾಮಿರು ಊರಿಗೆ ಮಾತ್ರ ಬರಬೇಡ’ ಎಂದು ಅಪ್ಪ ಅಮ್ಮನೇ ಹೇಳುತ್ತಿದ್ದಾರೆ.!

ಇದಕ್ಕೆಲ್ಲ ಕಾರಣವಾಗಿದ್ದು ಮಾರಕ ಮಹಾ ಮಾರಿ ಕರೊನಾ. ರೊಗ ವಿಶ್ವವೆಲ್ಲ ವ್ಯಾಪಿಸಿ ದೇಶವೇ ಶಟ್​ಡೌನ್ ಆಗುತ್ತಿದ್ದಂತೆ ಮುಂಬೈ, ಬೆಂಗಳೂರು, ಗೋವಾ ಭಾಗದಲ್ಲಿದ್ದ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ತಾಲೂಕುಗಳ ನೂರಾರು ಜನ ಊರಿಗೆ ವಾಪಸ್ ಬಂದಿದ್ದಾರೆ.

ಆಡಳಿತ ವಿದೇಶದಿಂದ ಬಂದವರನ್ನು ಕೇಂದ್ರೀಕರಿಸುತ್ತಿದೆ. ಹೊರ ಊರುಗಳಿಂದ ಬಂದವರ ತಪಾಸಣೆ ನಡೆಯುತ್ತಿಲ್ಲ. ಅವರಿಂದಲೂ ಗ್ರಾಮೀಣ ಭಾಗದಲ್ಲಿ ಗಂಡಾಂತರ ಎದುರಾಗಬಹುದು ಎಂಬ ಆತಂಕ ಗ್ರಾಮೀಣ ಭಾಗದ ಜನರಲ್ಲಿ ಮನೆ ಮಾಡಿದೆ. ಇದರಿಂದ ಸಂಬಂಧ, ಸ್ನೇಹ ಬಿಟ್ಟು ಜನರು ಕಟ್ಟು ನಿಟ್ಟಾಗಿ ಹೊರಗಿನಿಂದ ಬಂದವರನ್ನು ದೂರ ಇಡಲು ಪ್ರಾರಂಭಿಸಿದ್ದಾರೆ.

ಬೆಂಗಳೂರಿನಿಂದ ಕುಮಟಾದ ಗ್ರಾಮವೊಂದಕ್ಕೆ ಆಗಮಿಸಿದ ವ್ಯಕ್ತಿ ‘ನನಗೆ ರೋಗ ಬಂದಿಲ್ಲ. ನಮ್ಮ ಆಫೀಸಿನಲ್ಲಿ ಕೆಲವರಿಗೆ ಕರೊನಾ ಶಂಕೆ ಇತ್ತು ಎನ್ನುತ್ತ ಓಡಾಡಿಕೊಂಡಿದ್ದ. ಗ್ರಾಮಸ್ಥರೇ ಸೇರಿ ಆತನನ್ನು ಮನೆಯಿಂದ ಹೊರಗೆ ಬರದಂತೆ ದಿಗ್ಬಂಧನ ವಿಧಿಸಿದ್ದಾರೆ.

ಕುಮಟಾ ತಾಲೂಕಿನ ಬ್ರಹ್ಮೂರಿಗೆ ಬೆಂಗಳೂರಿನಿಂದ ಬಂದ ಕೆಲವು ಯುವಕರನ್ನು ಒಳಗೆ ಬಿಟ್ಟಿಲ್ಲ. ಕುಮಟಾ, ಅಂಕೋಲಾದ ಸಂಬಂಧಿಕರ ಮನೆಯಲ್ಲೇ ಉಳಿದುಕೊಂಡು ಬನ್ನಿ ಎಂದು ಹೇಳಿದ್ದಾರೆ.

ಖಾಸಗಿ, ಸರ್ಕಾರಿ ಉದ್ಯೋಗಕ್ಕೆ ಪಟ್ಟಣಕ್ಕೆ ಹೋಗಿ ಬರುವ ಗ್ರಾಮೀಣ ಭಾಗದ ನಿವಾಸಿಗಳನ್ನು ಊರೊಳಗೆ ಬಿಟ್ಟುಕೊಳ್ಳುತ್ತಿಲ್ಲ. ನೀನು ಬೇಕಾದರೆ ಕೆಲಸ ಬಿಡು ಊರು ತಿರುಗಬೇಡ ದಮ್ಮಯ್ಯ ಎಂದು ಮನೆಯವರೇ ದುಂಬಾಲು ಬೀಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net