

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ದೇವಾಂಗ ಬೀದಿ, ಬಳೇಪೇಟೆಯಲ್ಲಿರುವ ಶ್ರೀರಾಮ ಮಂದಿರ, ಯರಿಯೂರು, ಅಂಬಳೆ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳ ಬೀದಿಗಳಲ್ಲಿರುವ ರಾಮ ಮಂದಿರಗಳನ್ನು ತಳಿರು-ತೋರಣ, ಹೂವುಗಳಿಂದ ಸಿಂಗರಿಸಲಾಗಿತ್ತು.ಬೆಳಗ್ಗೆಯಿಂದಲೇ ಶ್ರೀರಾಮ ದೇವರ ಭಾವಚಿತ್ರವನ್ನು ಹೂವುಗಳಿಂದ ಸಿಂಗರಿಸಿ ರಾಮನಾಮ ಜಪಿಸಿ ನೈವೇದ್ಯವಿಟ್ಟು ಪೂಜೆ ನೆರವೇರಿಸಲಾಯಿತು.
ಮಜ್ಜಿಗೆ, ಪಾನಕ, ಕೊಸಂಬರಿ ವಿತರಿಸಲಾಯಿತು. ಶತಮಾನದ ಐತಿಹ್ಯ ಇರುವ ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಮದೇವರ ಪಟ್ಟಾಭಿಷೇಕ ನಡೆಯುವ ವಾಡಿಕೆ ಇದೆ. ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ನೀರು, ಮಜ್ಜಿಗೆ, ಪಾನಕ ಕುಡಿಯಲು ತಂಡೋಪತಂಡವಾಗಿ ಭಕ್ತರು ಆಗಮಿಸಿದರು.
ವಿವಿಧೆಡೆ ಆಚರಣೆ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಿಳಿಗಿರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿ ವಿಶೇಷ ಭಕ್ಷ್ಯಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು.