

ಬೇಲೂರು: ಇತ್ತೀಚಿನ ಒತ್ತಡದ ಬದುಕಿನ ನಡುವೆ ಯಾರೊಬ್ಬರೂ ತಮ್ಮ ಆರೋಗ್ಯದತ್ತ ಗಮನ ಹರಿಸದಿರುವುದರಿಂದ ಅಸಾಂಕ್ರಾಮಿಕ ರೋಗಗಳಿಗೆ ಕಾರಣರಾಗುತ್ತಿದ್ದು, ಇದನ್ನು ತಡೆಗಟ್ಟಬೇಕೆಂದರೆ ಪ್ರತಿಯೊಬ್ಬರೂ ಆಗಿಂದಾಗ್ಗೆ ಆರೋಗ್ಯ ತಪಾಸಣೆಗೆ ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಪುರಸಭೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಿಂದ ಅನೇಕ ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಯಾವುದೇ ವಸ್ತು ತರಬೇಕೆಂದರೂ ವಾಹನಗಳಲ್ಲಿ ಹೋಗುವುದರಿಂದ ನಮ್ಮ ದೇಹ ಜಡ್ಡುಗಟ್ಟಿ ಹೋಗಿವೆ. ಕಾಯಿಲೆ ಬಂದಾಗ ಆಸ್ಪತ್ರೆಗೆ ಓಡುತ್ತೇವೆ. ಅದು ಬಾರದಂತೆ ತಡೆಗಟ್ಟಲು ವಿಫಲರಾಗುತ್ತಿರುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಇತರ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಪೌರಕಾರ್ಮಿಕರು ಪ್ರತಿನಿತ್ಯ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುವುದರಿಂದ ಅವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಆರೋಗ್ಯ ಶಿಬಿರ ಆಯೋಜಿಸಿ ತಪಾಸಣೆ ಮಾಡಿಸಲಾಗುವುದು. ಸಾರ್ವಜನಿಕರು ಸಹ ಆಗಿಂದಾಗ್ಗೆ ವೈದ್ಯರ ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವೇಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ, ಸಾಂಕ್ರಾಮಿಕ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಅದಕ್ಕೆ ಎಲ್ಲರೂ ಜಾಗೃತರಾಗಿ ಚಿಕಿತ್ಸೆ ಪಡೆಯುತ್ತೇವೆ. ಆದರೆ ಅಸಾಂಕ್ರಾಮಿಕ ರೋಗ ಯಾವುದೇ ಸುಳಿವು ನೀಡದೆ ಮನುಷ್ಯನ ದೇಹದಲ್ಲಿ ಅಡಗಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಸಂಧ್ಯಾ ಮಾತನಾಡಿ, ಅಧುನಿಕ ಕಾಲಘಟ್ಟದಲ್ಲಿ ಒತ್ತಡ ಮತ್ತು ಗುಣಮಟ್ಟವಿಲ್ಲದ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕ್ಷಯರೋಗ ವಾಸಿಯಾಗುವ ರೋಗ. ಜನತೆ ಯಾವುದೇ ಖಾಸಗಿ ಆಸ್ಪತ್ರೆಗೆ ತೆರಳದೆ ಸರ್ಕಾರಿ ಅಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಎಲ್ಲ ನಾಗರಿಕರ ಆರೋಗ್ಯ ಕಾಪಾಡಬೇಕು ಎಂಬ ಹಿನ್ನೆಲೆಯಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಮುಖ್ಯಾಧಿಕಾರಿ ಮಂಜುನಾಥ್. ಸದಸ್ಯರಾದ ಬಿ.ಗಿರೀಶ್, ಜಮಾಲೂದ್ದೀನ್, ಅಶೋಕ್, ರತ್ನ, ಜಗದೀಶ್, ಪ್ರಭಾಕರ್, ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಇತರರಿದ್ದರು.