

ರಾಮನಗರ : ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುವ ಕೆಲಸಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನ್ಮೋಲ್ ಜೈನ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂಸಿಎ ಸಂಸ್ಥೆಯ ನನ್ನ ಒಳಿತಿಗಾಗಿ ಗ್ರಂಥಾಲಯ’ ಕಾರ್ಯಕ್ರಮಕ್ಕೆ ಪೂರಕವಾಗಿ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಪರಿವರ್ತನ ಸಹಯೋಗದೊಂದಿಗೆ ಅನುಷ್ಠಾನ ಸಹಭಾಗಿ ಸಂಸ್ಥೆ ಭಾರತ್ ಕೇರ್ಸ್ ಹಾಗೂ ಸಿಎಂಸಿಎ ಸಂಸ್ಥೆಗಳಿಂದ ಜಿಲ್ಲೆಯ 75 ಗ್ರಂಥಾಲಯಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಸ್ತಾಂತರ ಮಾಡಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ಸಿಎಂಸಿಎ ಸಂಸ್ಥೆಯು ನನ್ನ ಒಳಿತಿಗಾಗಿ ಗ್ರಂಥಾಲಯ’ ಕಾರ್ಯಕ್ರಮದಡಿ ಮಕ್ಕಳಿಗೆ ಜ್ಞಾನ ಬಿತ್ತುವ ಮೂಲಕ ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳು ಆಧುನಿಕತೆಗೆ ತಕ್ಕಂತೆ ತಮ್ಮನ್ನು ಪರಿವರ್ತಿಸಿಕೊಂಡು ಎಲ್ಲರಿಗೂ ಅಚ್ಚುಮೆಚ್ಚಿನ ತಾಣಗಳಾಗುತ್ತಿವೆ. ಗ್ರಂಥಾಲಯಗಳಿಗೆ ಭೇಟಿ ನೀಡುವ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮನೆಯಂತಹ ಮುಕ್ತ ವಾತಾವರಣ ನಿರ್ಮಾಣ ಮಾಡುವ ಮೂಲಕ ಮಕ್ಕಳು ಗ್ರಂಥಾಲಯಗಳಿಗೆ ಹೆಚ್ಚು ಹೆಚ್ಚು ಭೇಟಿ ನೀಡಲು ಪ್ರೇರೇಪಿಸಬೇಕು ಎಂದು ಸಿಇಒ ಹೇಳಿದರು.
ಸಿಎಂಸಿಎ ಸಂಸ್ಥೆಯು ಕಾರ್ಯಕ್ರಮವನ್ನು ಜಿಲ್ಲೆಯ ಉಳಿದ ಎಲ್ಲ ಗ್ರಂಥಾಲಯಗಳಿಗೆ ಶೀಘ್ರ ವಿಸ್ತರಿಸಲಿ ಎಂದು ಹೇಳಿದರು.
ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಪಂ ಗ್ರಂಥಾಲಯವನ್ನು ಮಾದರಿ ಗ್ರಂಥಾಲಯವಾಗಿ ರೂಪಿಸುವ ನಿಟ್ಟಿನಲ್ಲಿ ಮೂಲ ಸವಲತ್ತುಗಳನ್ನು ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಗ್ರಂಥಾಲಯಗಳಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಜಿಪಂ ಬದ್ಧವಾಗಿದೆ ಎಂದರು.
ರಾಮನಗರ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಿಎಂಸಿಎ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಗ್ರಂಥಾಲಯ ಕಾರ್ಯಕ್ರಮವು ಮಕ್ಕಳಿಗೆ ಉಪಯುಕ್ತವಾಗಿದ್ದು, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಜ್ಞಾನವನ್ನು ವೃದ್ಧಿ ಮಾಡುವ ಜತೆಗೆ ಜೀವನ ಕೌಶಲಗಳನ್ನು ಸಶಕ್ತಗೊಳಿಸುವಲ್ಲಿ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ. ಈ ಯೋಜನೆಯು ಪೂರ್ಣ ಜಿಲ್ಲೆಗೆ ಸ್ತರಣೆಯಾಗಲಿ ಎಂದರು.
ಸಿಎಂಸಿಎ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ ಸಿಇಒ ಪ್ರಿಯಾ ಕೃಷ್ಣಮೂರ್ತಿ, ಭಾರತ್ ಕೇರ್ಸ್‌ನ ಸಹಾಯಕ ವ್ಯವಸ್ಥಾಪಕರಾದ ಶ್ರುತಿ ಹಾಗೂ ಸಿಎಂಸಿಎ ಸಹಾಯಕ ನಿರ್ದೇಶಕ ಪಿ.ಆರ್.ಮರುಳಪ್ಪ ಮಾತನಾಡಿದರು.
ಜಿಲ್ಲೆಯ ಐದೂ ತಾಲೂಕುಗಳ ತಲಾ ನಾಲ್ಕು ಗ್ರಂಥಾಲಯ ಮೇಲ್ವಿಚಾರಕರಿಗೆ ಉಪಕರಣಗಳನ್ನು ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು. ಸಿಎಂಸಿಎ ಸಿಬ್ಬಂದಿ, ಜಿಲ್ಲೆಯ ಹಲವು ಗ್ರಂಥಪಾಲಕರು, ಸೂಪರ್ ಮೆಂಟರ್ಸ್ ಭಾಗವಸಿದ್ದರು.