

ಕಾರವಾರ: ಕರೊನಾ ಪರಿಸ್ಥಿತಿಯಲ್ಲಿ ಜಿಲ್ಲೆಯನ್ನು ಹಳದಿ ಬಣ್ಣದಲ್ಲಿ ಗುರುತಿಸಲಾಗಿದೆ. ಇಲ್ಲಿ ಲಾಕ್ಡೌನ್ ಸಡಿಲ ಮಾಡಿ ಮುಂದಿನ ದಿನದಲ್ಲಿ ಯಾವ್ಯಾವ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ನಿರ್ಣಯಿಸುವ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದೆ. ಈಗ ಜಿಲ್ಲೆಯ ಎಲ್ಲರ ಚಿತ್ತ ಶಿವರಾಮ ಹೆಬ್ಬಾರರತ್ತ ನೆಟ್ಟಿದೆ.
ಸದ್ಯ ಶಿವರಾಮ ಹೆಬ್ಬಾರ ಅವರು ಬೆಂಗಳೂರಿನಲ್ಲಿದ್ದು, ಮೇ 2ರಂದು ಸಾಯಂಕಾಲ ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಅವರೊಂದಿಗೆ ರ್ಚಚಿಸಿ ಮೇ 3ರ ಹೊತ್ತಿಗೆ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ.
ಏನಿರುತ್ತೆ..?: ಜಿಲ್ಲೆಯಲ್ಲಿ ಈಗಾಗಲೇ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ರಸ್ತೆ, ಚರಂಡಿ ಮುಂತಾದ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಎಲ್ಲ ಆಸ್ಪತ್ರೆ, ಬಟ್ಟೆ, ಇಲೆಕ್ಟ್ರಾನಿಕ್ಸ್, ಮೊಬೈಲ್ ಸೇರಿ ಎಲ್ಲ ಅಂಗಡಿಗಳು, ರಿಪೇರಿ ಅಂಗಡಿಗಳು, ಎಲ್ಲ ರೀತಿಯ ಸಣ್ಣ ಉದ್ದಿಮೆಗಳು, ಕಾರ್ಖಾನೆಗಳು, ಪೆಟ್ರೋಲ್ ಬಂಕ್ಗಳು ಮುಂತಾದವಕ್ಕೆ ಯಾವುದೇ ಅನುಮತಿ ಇಲ್ಲದೆ ತೆರೆಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಹೋಟೆಲ್ಗಳನ್ನು ತೆರೆದರೂ ಅಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಬೇಕು ಎಂದು ಸರ್ಕಾರ ಹೇಳಿದೆ.
ಏನಿರಲ್ಲ..?
ಆಟೋ ರಿಕ್ಷಾ, ಬಸ್, ಟೆಂಪೊ, ರೈಲು ಸೇರಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಅಂತರ ತಾಲೂಕು, ಜಿಲ್ಲೆ, ರಾಜ್ಯ ಸಂಚಾರಕ್ಕೆ ನಿರ್ಬಂಧ. ಸಿನಿಮಾ ಮಂದಿರಗಳು, ಮಾಲ್ಗಳು, ಪಾರ್ಕ್ಗಳು, ಕಡಲ ತೀರಗಳು, ಜಿಮ್ ವ್ಯಾಯಾಮ ಶಾಲೆಗಳು, ಶಾಲೆ, ಕಾಲೇಜ್ ಟ್ಯೂಷನ್ ಕ್ಲಾಸ್, ಬ್ಯೂಟಿ ಪಾರ್ಲರ್, ಸಲೂನ್, ಎಲ್ಲ ರೀತಿಯ ಧಾರ್ವಿುಕ, ಸಾಂಸ್ಕೃತಿಕ, ಸಾರ್ವಜನಿಕ ಕಾರ್ಯಕ್ರಮಗಳು, ಸಾಮೂಹಿಕ ಪ್ರಾರ್ಥನೆ ಮುಂತಾದವುಗಳಿಗೆ ನಿರ್ಬಂಧ ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ರೂಪಿಸಿದ ನಿಯಮಾವಳಿಯಂತೆ ಹಲವು ಸೌಲಭ್ಯಗಳನ್ನು ಈಗಾಗಲೇ ಜಿಲ್ಲೆಯಲ್ಲಿ ಕಲ್ಪಿಸಲಾಗಿದೆ. ಇನ್ನು ಯಾವ ಸೇವೆಗಳು ಮೇ 4ರ ನಂತರ ತೆರೆದುಕೊಳ್ಳಲಿವೆ ಎಂಬ ಬಗ್ಗೆ ಉಸ್ತುವಾರಿ ಸಚಿವರು ನಿರ್ಣಯ ಕೈಗೊಳ್ಳಲಿದ್ದಾರೆ. ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ