ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಅದ್ವಿತೀಯ ಸಾಧನೆ

08M.D.R.1
Published on

ಮದ್ದೂರು: ಮಹಿಳೆಯರು ಪುರಾಣ ಕಾಲದಿಂದಲೂ ಪುರುಷ ಪ್ರಾಧಾನ್ಯತೆಯಿಂದ ನಿಯಂತ್ರಿಸಲ್ಪಟ್ಟಿದ್ದು ಈಗ ಅವರಿಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸುವ ಉತ್ತಮ ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಮುಖ್ಯವಾಹಿನಿಗೆ ಬರಬೇಕೆಂದು ತುಮಕೂರು ಸಪ್ತಗಿರಿ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ನಿರಂಜನಾರಾಧ್ಯ ತಿಳಿಸಿದರು.

ಪಟ್ಟಣದ ವಜ್ರಕಾಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಹಾಗೂ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ ತುಮಕೂರು ವತಿಯಿಂದ ಮಹಿಳಾ ದಿನಾಚರಣೆ ಮತ್ತು ಶಾಖದ ಅಲೆಗಳು ಹಾಗೂ ಹವಾಮಾನ ಬದಲಾವಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿರುವುದು ಪ್ರಶಂಸನೀಯ ಸಂಗತಿ ಎಂದರು.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಬಗ್ಗೆ ತಿಳಿಸುತ್ತಾ ಸಾಕ್ಷರತೆ ಪ್ರಾಥಮಿಕ ಶಿಕ್ಷಣದಲ್ಲಿ ನಲಿ ಕಲಿ ಸಾಹಿತ್ಯ ಸಂಭ್ರಮ ಹೀಗೆ 3 ದಶಕಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದೆ. ಜನಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವುದು ವಿಜ್ಞಾನ ಚಳವಳಿಯನ್ನು ಭಾರತ ಜ್ಞಾನ-ವಿಜ್ಞಾನ ಸಮಿತಿ ದೇಶಾದ್ಯಂತ ರೂಪಿಸಿದೆ. ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಮನೋ ಧಾರ್ಮಿಕ ಈ ದೇಶದ ಪ್ರಗತಿಗೆ ಮುಖ್ಯವಾಗಿರುವುದರಿಂದ ಈ ಸಂಘಟನೆ ಮುಖಾಂತರ ಶಿಕ್ಷಕರು, ಸಾಮಾಜಿಕ ಕಳಕಳಿ ಎಲ್ಲರೂ ಸಮಾಜದ ಎಲ್ಲ ಸಮುದಾಯದವರಲ್ಲೂ ವೈಜ್ಞಾನಿಕ ಮನೋಧರ್ಮ ಬೆಳೆಸುವಲ್ಲಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು .

ಕಾರ್ಯಾಗಾರದಲ್ಲಿ ಶಾಖದ ಅಲೆಗಳು ಮತ್ತು ಹವಾಮಾನದ ಬದಲಾವಣೆ ಕುರಿತು ಬಿಜಿವಿಎಸ್ ಜಿಲ್ಲಾಧ್ಯಕ್ಷ ಪ್ರೊ.ಎಸ್.ರೇವಣ್ಣ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಮಹಿಳಾ ಹೋರಾಟಗಾರ್ತಿ ಶ್ರೀಲತಾ ಮಾತನಾಡಿ, ಮಹಿಳಾ ಸಮಾನತೆಯ ಬಗ್ಗೆ ಬಿಜಿವಿಎಸ್ ನಾಲ್ಕು ದಶಕಗಳಿಂದಲೂ ತನ್ನದೆ ಕಾರ್ಯಕ್ರಮಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಪವಾಡ ಬಯಲು ಸ್ವ ಸಹಾಯ ಸಂಘಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರು ಸಂಘಟನೆಯಾಗುವುದರ ಮೂಲಕ ಯಶಸ್ಸು ಪಡೆಯಬಹುದು ಎಂದರು.

ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಮಾಮ ರವಿ ಅವರು, ಹವಾಮಾನ ಬದಲಾವಣೆಯಾಗುತ್ತಿರುವುದರಿಂದ ಭೂಮಿ ಮೇಲಿನ ಜೀವಿಗಳಿಗೆ ಆಗುತ್ತಿರುವ ಪರಿಣಾಮಗಳು ಹಾಗೂ ಅದಕ್ಕಿರುವ ಪರಿಹಾರದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.

ರಾಜ್ಯ ಕಾರ್ಯದರ್ಶಿ ಪ್ರಶಾಂತಬಾಬು, ತಾಲೂಕು ಕಾರ್ಯದರ್ಶಿ ಸೊ.ರಾ.ಶಿವರಾಂ, ಜಿಲ್ಲಾ ಅಧ್ಯಕ್ಷ ಪ್ರೊ.ರೇವಣ್ಣ, ಕಾರ್ಯದರ್ಶಿ ಸಿದ್ದರಾಜು, ಶಿಕ್ಷಕರಾದ ನಾಗೇಂದ್ರಸ್ವಾಮಿ, ಚಂದ್ರಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net