

ಹನೂರು: ಗ್ರಾಮ ಹಾಗೂ ಶಾಲೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸೋಮವಾರ ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್‌ಪಿಎಸ್ ಕ್ಯಾಂಪ್‌ನ ಸಿ ಮತ್ತು ಡಿ ವಿಲೇಜ್‌ನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಸೇರಿದ ಸುಮಾರು 50ಕ್ಕೂ ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಕುಡಿಯುವ ನೀರಿನ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಗ್ರಾಪಂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ 110 ಕುಟುಂಬಗಳಿದ್ದು ಸುಮಾರು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಕೃಷಿ ಜಮೀನುಗಳಲ್ಲಿ ಕೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಗ್ರಾಮದಲ್ಲಿ ಒಂದೂವರೆ ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಂಬಂಧ ಪ್ರತಿಭಟನೆ ನಡೆಸಲಾಗಿತ್ತು. ಕಳೆದ ವಾರ ತಾಪಂ ಇಒ ಉಮೇಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಕೈಪಂಪ್ ದುರಸ್ತಿ ಮಾಡಿಸಿದ್ದಾರೆ. ಆದರೆ, ನೀರು ಮಣ್ಣು ಮಿಶ್ರಿತದಿಂದ ಕೂಡಿದೆ. ಕುಡಿಯುವುದಕ್ಕೆ ಹಾಗೂ ಶೌಚಗೃಹ, ಸ್ನಾನದ ಬಳಕೆಗೂ ಯೋಗ್ಯವಾಗಿಲ್ಲ. ಇದರಿಂದ ರೋಗ ರುಜಿನಗಳ ಭೀತಿ ಆವರಿಸಿದ್ದು ನೀರಿಗಾಗಿ ಕಷ್ಟ ಪಡುತ್ತಿದ್ದೇವೆ ಎಂದು ದೂರಿದರು.
ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನೀರು ಸರಬರಾಜು ಸಂಪರ್ಕ ನೀಡಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಗ್ರಾಪಂ ಅಧಿಕಾರಿಗಳು ಗ್ರಾಮದಲ್ಲಿ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಹೊಸದಾಗಿ ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ತಾಲೂಕು ಪಂಚಾಯಿತಿ ಕಚೇರು ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಸರ್ಕಾರಿ ಶಾಲೆ ಅಡುಗೆ ಸಹಾಯಕಿ ಕುಪ್ಪಯಮ್ಮ ಮಾತನಾಡಿ, ಶಾಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಬೋರ್‌ನಲ್ಲಿ ನೀರು ಬರುತ್ತಿಲ್ಲ. ಕೈಪಂಪ್‌ನಲ್ಲಿ ಬರುವ ನೀರು ಅಶುದ್ಧವಾಗಿದೆ. ಇದರಿಂದ ಬಿಸಿಯೂಟಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಪರಿಣಾಮ ಸಮೀಪದ ಜಮೀನಿನ ಪಂಪ್‌ಸೆಟ್‌ನಿಂದ ನೀರನ್ನು ಹೊತ್ತು ತಂದು ಅಡುಗೆ ತಯಾರಿಸಬೇಕಾದ ಸ್ಥಿತಿ ಇದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಗ್ರಾಮಸ್ಥರಾದ ತೊಳಸಮ್ಮ, ಕಮಲಮ್ಮ, ಉಮಾ, ಸಿದ್ದಮ್ಮ, ನೀಲಾ, ಗೋವಿಂದಮ್ಮ, ವಿಜಯಾ, ರೇಖಾ, ಪರಮೇಶ್, ಮಹೇಶ್, ಪೆರುಮಾಳ್, ಕುಮಾರ್, ಮಾಧು, ಚಂದ್ರು ಇನ್ನಿತರರಿದ್ದರು.
ಗ್ರಾಮದಲ್ಲಿ ಕೈಪಂಪ್ ದುರಸ್ತಿ ಮಾಡಿಸಿದ್ದು ನೀರು ಪೂರೈಕೆಯಾಗುತ್ತಿದೆ. ಅಶುದ್ಧ ನೀರು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಾಪಂ ಇಒ ಅವರನ್ನು ಗ್ರಾಮಕ್ಕೆ ಕಳುಹಿಸಿ ಪರಿಶೀಲಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು.
ಮೋನಾರೋತ್, ಸಿಇಒ, ಜಿಪಂ ಚಾ.ನಗರ