

ಮುಂಡಗೋಡ: ಕಳೆದ ಎರಡೂವರೆ ವರ್ಷದಿಂದ ಬೇರೆಯಾಗಿದ್ದ ದಂಪತಿ ಪಟ್ಟಣದ ಸಾಧನಾ ಮಹಿಳಾ ಸಹಾಯವಾಣಿ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಸೋಮವಾರ ಒಂದಾದರು. 2018ರಲ್ಲಿ ತಾಲೂಕಿನ ಕುಂದರಗಿ ಗ್ರಾಮದ ನೇತ್ರಾವತಿ ಹೊಸಮನಿ ಎಂಬುವರು ಧಾರವಾಡದ ಲಕ್ಷ್ಮೀಸಿಂಗನಕೇರೆಯ ಮಂಜುನಾಥ ಭೋವಿವಡ್ಡರ ಎಂಬುವರನ್ನು ವಿವಾಹವಾಗಿದ್ದರು. ಕೌಟುಂಬಿಕ ಕಲಹದ ಕಾರಣದಿಂದ 3 ತಿಂಗಳ ಗರ್ಭಿಣಿ ನೇತ್ರಾವತಿಯನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಹೆರಿಗೆಯಾಗಿ ಒಂದೂವರೆ ವರ್ಷವಾದರೂ ಪತಿ ಮತ್ತು ಕುಟುಂಬದವರು ಮಗುವನ್ನು ನೋಡಲು ಬಂದಿರಲಿಲ್ಲ. ಕಳೆದ ತಿಂಗಳು ನೇತ್ರಾವತಿ ಮತ್ತು ಆಕೆಯ ಮಾವ ಬಸವರಾಜ ಮಗುವಿನ ಜತೆ ಸಾಧನಾ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ಬಂದು ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ನೇತ್ರಾವತಿ ಗಂಡನ ಕಡೆಯ ಹಿರಿಯರನ್ನು ಕರೆಸಿ ಪೊಲೀಸರ ಸಹಾಯದಿಂದ ಆತನಿಗೆ ನೋಟಿಸ್ ಜಾರಿ ಮಾಡಲಾಯಿತು. ಕುಟುಂಬದ ಎರಡೂ ಕಡೆಯ ಹಿರಿಯರೊಂದಿಗೆ ಮಾತುಕತೆ ನಡೆಸಿ ಬೇರೆಯಾಗಿದ್ದ ದಂಪತಿಯನ್ನು ಒಂದುಗೂಡಿಸಲಾಯಿತು ಎಂದು ಕೇಂದ್ರದ ಮುಖ್ಯಸ್ಥೆ ಡಾ. ಇಸಬೆಲ್ಲಾ ಝೇವಿಯರ್ ತಿಳಿಸಿದ್ದಾರೆ.