ಎರಡೂವರೆ ಲಕ್ಷ ರೂ. ಮೌಲ್ಯದ ಚರಸ್ ವಶ

11gkn2-a-
Published on

ಗೋಕರ್ಣ: ಫಿನ್​ಲ್ಯಾಂಡ್ ನಾಗರಿಕ ಜಾನ್ ಪೀಟರ್ ಪಸನೊನ್ ಎಂಬ ಪ್ರವಾಸಿಯಿಂದ 510 ಗ್ರಾಂ ತೂಕದ 2 ಲಕ್ಷ 50 ಸಾವಿರ ರೂ. ಅಂದಾಜು ಮೌಲ್ಯದ ಚರಸ್ ಮಾದಕ ದ್ರವ್ಯವನ್ನು ಇಲ್ಲಿನ ಪೊಲೀಸರು ಸೋಮವಾರ ರಾತ್ರಿ ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.

ವ್ಯಾಪಾರದ ಶಂಕೆ: ಈ ಪ್ರವಾಸಿ ಕಳೆದ 2009ರಿಂದ ತಪ್ಪದೆ ಗೋಕರ್ಣಕ್ಕೆ ಬರುತ್ತಿದ್ದು, ವಿದೇಶಿಯರ ಸೀಸನ್ ಮುಗಿಯುವ ತನಕ ಮೂರರಿಂದ ನಾಲ್ಕು ತಿಂಗಳು ಇಲ್ಲಿಯೇ ವಾಸಿಸುತ್ತಾನೆ. ಇವನ ಚಲನವಲನದ ಬಗ್ಗೆ ಅನುಮಾನಗೊಂಡ ಪೊಲೀಸರು ಕಳೆದ ಕೆಲ ತಿಂಗಳಿನಿಂದ ಇವನ ಮೇಲೆ ತೀವ್ರ ನಿಗಾ ಇರಿಸಿದ್ದರು. ಸೋಮವಾರ ಸಂಜೆ ಬೇರೆ ಊರಿಂದ ತಿರುಗಿ ಬಂದ ಇವನನ್ನು ಅನುಸರಿಸಿ ಹೋದ ಪೊಲೀಸರು ಬೀಚ್ ಬಳಿ ಆತನಿಂದ 510 ಗ್ರಾಂ ತೂಕದ ಚರಸ್ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಒಬ್ಬ ವ್ಯಕ್ತಿಯಿಂದ ದೊರೆತ ಅತಿ ಹೆಚ್ಚಿನ ಪ್ರಮಾಣದ ಮಾದಕ ವಸ್ತು ಇದಾಗಿದೆ. ಸ್ವಂತಕ್ಕೆ ಸೇವಿಸಲು ಇಟ್ಟುಕೊಳ್ಳುವವರು ಇಷ್ಟೊಂದು ಪ್ರಮಾಣದಲ್ಲಿ ಚರಸ್ ಸಂಗ್ರಹಿಸುವ ಸಾಧ್ಯತೆಗಳಿಲ್ಲದಿರುವುದರಿಂದ ಈತ ಮಾದಕ ದ್ರವ್ಯ ವ್ಯಾಪಾರಿ ಇರಬಹುದು ಎಂಬ ಅನುಮಾನ ಕೇಳಿ ಬರುತ್ತಿದೆ.

ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಶಿವಾನಂದ ಗೌಡ, ರಾಜೇಶ ನಾಯ್ಕ, ವಿನಯ ಗೌಡ, ಸಚಿನ್ ನಾಯ್ಕ ಮುಂತಾದವರಿದ್ದರು.

ಫಿನ್​ಲ್ಯಾಂಡ್ ನಾಗರಿಕ ಜಾನ್ ಪೀಟರ್ ಪಸನೊನ್​ಎಂಬ ಪ್ರವಾಸಿ ಮಾರಾಟದ ಉದ್ದೇಶಕ್ಕಾಗಿಯೇ ಇದನ್ನು ಇಟ್ಟುಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಿಂದ ಪೂರ್ಣ ವಿವರ ತಿಳಿದು ಬರಲಿದೆ. | ನವೀನ ನಾಯ್ಕ ಪಿಎಸ್​ಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net