

ಪಾಂಡವಪುರ: ಖಾಸಗಿ ಶಾಲಾ ವಿದ್ಯಾರ್ಥಿಗಳ ಸರಿಸಮಾನಕ್ಕೆ ಸರ್ಕಾರಿ ಶಾಲೆ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮಾಡುತ್ತಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅದರ ಸಾಕಾರಕ್ಕಾಗಿ ಪಟ್ಟಣದ ಫ್ರೆಂಚ್‌ರಾಕ್ಸ್ ಶತಮಾನೋತ್ಸವ ಶಾಲೆ ಮತ್ತು ತಾಲೂಕಿನ ಸೀತಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೋಮವಾರ ಇಂಗ್ಲಿಷ್ ಲ್ಯಾಬ್ (ಇಂಗ್ಲಿಷ್ ಭಾಷಾ ಕಲಿಕಾ ಪ್ರಯೋಗಾಲಯ) ಆರಂಭಿಸಿದರು.
ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ತಾಲೂಕಿನ ಎರಡು ಶಾಲೆಗಳಲ್ಲಿ ಪ್ರಾರಂಭಿಕವಾಗಿ ಇಂಗ್ಲಿಷ್ ಲ್ಯಾಬ್ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಚಿನಕುರಳಿ, ಬನ್ನಂಗಾಡಿ, ಹಿರೇಮರಳಿ ಹಾಗೂ ರಾಗಿಮುದ್ದನಹಳ್ಳಿ ಶಾಲೆಗಳಿಗೂ ಲ್ಯಾಬ್ ವಿಸ್ತಾರವಾಗಲಿದೆ. ಬಳಿಕ ಮೇಲುಕೋಟೆ ಕ್ಷೇತ್ರದ ಎಲ್ಲ ಭಾಗಗಳಲ್ಲೂ ಲ್ಯಾಬ್ ತೆರೆಯಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಇಂಗ್ಲಿಷ್ ಲ್ಯಾಬ್ ತೆರೆಯುವುದಕ್ಕಾಗಿ ಶಾಲೆಯ 1ರಿಂದ 10 ತರಗತಿವರೆಗಿನ ವಿದ್ಯಾರ್ಥಿಗಳ ಸಂಖ್ಯೆ 200ಕ್ಕೂ ಹೆಚ್ಚು ಇರಬೇಕು ಎಂಬ ನಿಯಮ ರೂಪಿಸಿಕೊಳ್ಳಲಾಗಿದೆ. ಲರ್ನಿಂಗ್ ಮ್ಯಾಟರ್ಸ್ ಎಂಬ ಸಂಸ್ಥೆ ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಒಂದು ಶಾಲೆಯಲ್ಲಿ ಇಂಗ್ಲಿಷ್ ಲ್ಯಾಬ್ ತೆರೆಯಲು ಶಿಕ್ಷಕರು, ಪೀಠೋಪಕರಣ, ಟಿವಿ, ಇಂಟರ್‌ನೆಟ್, ಡಿವೈಸರ್‌ಗಳು ಸೇರಿದಂತೆ ಇತರ ಪರಿಕರಗಳಿಗಾಗಿ ವಾರ್ಷಿಕವಾಗಿ 4.25 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಆಂದಾಜಿಸಲಾಗಿದೆ. ಇಂಗ್ಲಿಷ್ ಲ್ಯಾಬ್‌ಗೆ ಪ್ರತೇಕವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಈ ಎಲ್ಲ ವೆಚ್ಚಗಳನ್ನು ದಾನಿಗಳ ಮೂಲಕ ಸಂಗ್ರಹಿಸಲಾಗುತ್ತಿದೆ. ಸದ್ಯಕ್ಕೆ ಮೂರು ವರ್ಷಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಳ್ಳಲಾಗಿದೆ.
ಇಂಗ್ಲಿಷ್ ಲ್ಯಾಬ್‌ನ ಪ್ರಯೋಜನಗಳು: ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಹಿಂದುಳಿದಿದ್ದು, ಇದರಿಂದ ಸಿಇಟಿ, ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಭಾಷಾ ಜ್ಞಾನದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಖಾಸಗಿ ಶಾಲೆಗಳ ಮಕ್ಕಳಿಗೆ ಸರಿಸಮಾನವಾದ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗನ್ನು ನಿವಾರಿಸಲು ಇಂಗ್ಲಿಷ್ ಪ್ರಯೋಗಾಲಯ ಸಹಕಾರಿಯಾಗಲಿದೆ. ಈ ತಾರಾ ಪ್ರಯೋಗಾಲಯದ ಮೂಲಕ ಈಗಾಗಲೇ 70 ಸಾವಿರ ವಿದ್ಯಾರ್ಥಿಗಳು ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಲರ್ನಿಂಗ್ ಮ್ಯಾಟರ್ಸ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಪಕರಣಗಳು, ಮೀಡಿಯಾ, ಚಟುವಟಿಕೆ, ಟ್ಯಾಬ್, ಟೆಸ್ಟ್ ಮತ್ತು ಕ್ವಿಜ್‌ಗಳ ಮೂಲಕ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತದೆ. ಇದರಿಂದ ಮಕ್ಕಳು ಸಾರ್ವಜನಿಕವಾಗಿ ಮಾತನಾಡುವುದು, ಬಾಡಿ ಲಾಂಗ್ವೇಜ್, ಇಂಗ್ಲಿಷ್ ಉಚ್ಚಾರಣೆ ಜತೆಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ಕಲಿಕಾ ಸಂಸ್ಥೆ ಮಾಹಿತಿ ನೀಡಿದೆ.
ಕಾರ್ಯಕ್ರಮಕ್ಕೆ ದರ್ಶನ್ ಪುಟ್ಟಣ್ಣಯ್ಯ ಚಾಲನೆ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಾರಾ ಇಂಗ್ಲಿಷ್ ಲ್ಯಾಬ್ ಮೂಲಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದಕ್ಕಾಗಿ ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಅದನ್ನು ಕಾರ್ಯಗತಗೊಳಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಾನು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್ ಜ್ಞಾನದ ಕೊರತೆ ಇರುವುದನ್ನು ಗಮನಿಸಿದ್ದೇನೆ. ಹಾಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಲಾಗುವುದು ಎಂದು ತಿಳಿಸಿದರು.
ಲರ್ನಿಂಗ್ ಮ್ಯಾಟರ್ಸ್ ಸಂಸ್ಥೆಯವರು ಖಾಸಗಿ ಸಾಫ್ಟ್‌ವೇರ್ ವೃದ್ಧಿಸಿಕೊಂಡು ಲ್ಯಾಬ್‌ನ ಮೂಲಕ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಹೆಚ್ಚಿಸುವ ಕೆಲಸ ಮಾಡಲಿದ್ದಾರೆ. ಶಾಲಾ ಶಿಕ್ಷಕರು, ಪಾಲಕರು ಸಂಸ್ಥೆಯವರಿಗೆ ಸಹಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಕ್ಷೇತ್ರದಾದ್ಯಂತ ಇಂಗ್ಲಿಷ್ ಲ್ಯಾಬ್ ವಿಸ್ತರಿಸಲು ಹಲವು ಖಾಸಗಿ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಲಾಗಿದೆ ಎಂದರು.
ಗ್ರಾಪಂಗಳಲ್ಲಿ ಅಧಿಕಾರಿಗಳು ಹೇಗೆ ವೈಜ್ಞಾನಿಕವಾಗಿ ಕೆಲಸ ಮಾಡಬೇಕು, ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದು, ಕೆರೆಗಳ ಒತ್ತವರಿ ತೆರವುಗೊಳಿಸಿ ಹೂಳು ತೆಗೆದು ಕೆರೆ ಅಭಿವೃದ್ಧಿಪಡಿಸುವುದು, ಬೇಬಿ ಬೆಟ್ಟದ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು, ಪುರಸಭೆ ಹಾಗೂ ಮೇಲುಕೋಟೆ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಕೆ, ಮಹಿಳೆಯರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಫೌಂಡೇಷನ್‌ಗಳ ಮೂಲಕ ಹಣ ಸಂಪಾದನೆ ಮಾಡುವವರೆ ಹೆಚ್ಚಾಗಿದ್ದಾರೆ. ಇಂತಹವರ ನಡುವೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಕ್ಷೇತ್ರದ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಹೆಚ್ಚುವುದಕ್ಕೆ ಮುಂದಾಗಿರುವುದು ಸ್ವಾಗತಾರ್ಹ ವಿಚಾರವಾಗಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುಟ್ಟಣ್ಣಯ್ಯ ಫೌಂಡೇಷನ್ ಅಧ್ಯಕ್ಷೆ ಸುನೀತಾ ಪುಟ್ಟಣ್ಣಯ್ಯ, ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ರವಿಕುಮಾರ್, ರೈತಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ್, ಫ್ರೆಂಚ್‌ರಾಕ್ಸ್ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಪುಟ್ಟಣ್ಣಯ್ಯ ಫೌಂಡೇಷನ್ ಕಾರ್ಯ ನಿರ್ವಾಹಕ ನಿರ್ದೇಶಕ ರಂಜಿತ್, ಲರ್ನಿಂಗ್ ಮ್ಯಾಟರ್ಸ್ ಸಂಸ್ಥೆಯ ಸಿಇಒ ರಾಮಮೂರ್ತಿ, ಗೌರಿ ಮಹೇಶ್, ವಕೀಲರಾದ ಕಾಡೇನಹಳ್ಳಿ ಸತೀಶ್, ಜಿ.ಬಿ.ಸುರೇಶ್, ಮುರಳೀಧರ್ ಇತರರಿದ್ದರು.