ಎರಡು ಪ್ರತ್ಯೇಕ ಘಟನೆ ನಾಲ್ವರು ಸಜೀವ ದಹನ

bkt-16-11
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಜಮೀನಿನಲ್ಲಿ ಇದ್ದ ಶೆಡ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಇಡೀ ಶೆಡ್ ಸುಟ್ಟು ಕರಲಾಗಿರುವುದು.
Published on

ಬಾಗಲಕೋಟೆ: ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಬೆಳಗಿನ ಜಾವದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿವೆ.
ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ರಾತ್ರಿ ಕುಟುಂಬ ಸದಸ್ಯರ ಜಮೀನಿನ ಶೆಡ್‌ನಲ್ಲಿ ಮಲಗಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಶೆಡ್‌ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದು ಘಟನೆಯಲ್ಲಿ ತಾಯಿ- ಮಗಳು ಇಬ್ಬರು ಸಾವನ್ನಪ್ಪಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ವಿಕಾಸ್, ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೇರಿದಂತೆ ಮುಧೋಳ, ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೆಯೇ ಶ್ವಾನದಳ, ಬೆರಳಚ್ಚು ತಜ್ಞರು, ಅಪರಾಧ ಕೃತ್ಯಸ್ಥಳ ಪರಿಶೋಧನಾ ಅಽಕಾರಿಗಳ ತಂಡ ಭೇಟಿ ನೀಡಿ ಇಡೀ ಪ್ರದೇಶವನ್ನು ಪರಿಶೀಲಿಸಿ, ಮಾಹಿತಿ ಸಂಗ್ರಹ ನಡೆಸಿದ್ದಾರೆ.
ಮತ್ತೊಂದೆಡೆ ಹುನಗುಂದ ತಾಲೂಕಿನ ಬೆಳಗಲ್ ಕ್ರಾಸ್‌ನಲ್ಲಿ ಲಾರಿ ಒಂದಕ್ಕೆ ಹಿಂದಿನಿಂದ ಮತ್ತೊಂದು ಲಾರಿ ಗುದ್ದಿ ಎರಡು ಲಾರಿಗಳು ಧಗಧಗಿಸಿದ್ದು, ಓರ್ವ ಚಾಲಕ ಸೇರಿ ಇಬ್ಬರು ಸಜೀವ ದಹನಗೊಂಡಿದ್ದಾರೆ. ಹುನಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತಾಲೂಕಿನ ಬೆಳಗಲಿ ಗ್ರಾಮದ ಜಮೀನಿನ ಶೆಡ್‌ನಲ್ಲಿ ವಾಸ ಇದ್ದ ಪೆಂಡಾರಿ ಕುಟುಂಬವನ್ನು ಸರ್ವನಾಶ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಬೆಳಗಿನ ಜಾವ ೨.೩೦ ರಿಂದ ೩.೩೦ ಗಂಟೆ ಮಧ್ಯದಲ್ಲಿ ಶೆಡ್‌ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಬೆಂಕಿಯ ಕೆನ್ನಾಲಿಯಲ್ಲಿ ಸಿಕ್ಕು ಜೈನಾಬಿ ಪೆಂಡಾರಿ (೬೦) ಹಾಗೂ ಆಕೆಯ ಪುತ್ರಿ ೨೨ ವರ್ಷದ ಶಭಾನಾ ಪೆಂಡಾರಿ ಸಜೀವ ದಹನವಾಗಿದ್ದಾರೆ. ಶೆಡ್‌ನಲ್ಲಿ ಇದ್ದ ಸಿದ್ಧಕಿ ಎನ್ನುವ ಯುವಕ ಪೆಟ್ರೋಲ್ ವಾಸನೆಯಿಂದ ಹೊರಗಡೆ ಬಂದಿದ್ದು ಬಚಾವ್ ಆಗಿದ್ದಾನೆ. ಮನೆಯ ಯಜಮಾನ ದಸ್ತಗೀರಸಾಬ್ ಹಾಗೂ ಅವರ ಪುತ್ರ ಸುಭಾನ್ ಗಾಯಗೊಂಡಿದ್ದು, ಮಹಾಲಿಂಗಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಂಕಿ ಹಚ್ಚಿ ಕುಟುಂಬವನ್ನು ನಾಶಪಡಿಸಲು ಮುಂದಾಗಿದ್ದ ಆರೋಪಿಗಳು ಇವರ ಸಂಬಂಽಕರು ಎನ್ನಲಾಗುತ್ತಿದೆ. ಹಣಕಾಸು ವ್ಯವಹಾರ ಇಲ್ಲವೇ ಅನೈತಿಕ ಸಂಬಂಧದ ಕಾರಣಕ್ಕೆ ದ್ವೇಷ ಬೆಳೆದು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಕಂಡು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಹೇಳುತ್ತಾರೆ. ಈ ಸಂಬಂಧ ಅನುಮಾನದ ಮೇಲೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಸಹ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಕುಟುಂಬ ಸರ್ವನಾಶಕ್ಕೆ ಪ್ಲಾನ್
ತೋಟದ ಶೆಡ್‌ನಲ್ಲಿ ದಸ್ತಗೀರಸಾಬ್ ಕುಟುಂಬದ ಒಟ್ಟು ಐವರು ರಾತ್ರಿ ಮಲಗಿದ್ದರು. ತಡರಾತ್ರಿ ೨.೩೦ ರಿಂದ ೩.೩೦ ನಡುವೆ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು, ಮೊದಲು ಶೆಡ್‌ನ ಹೊರಗಡೆ ಬಾಗಿಲನ್ನು ಲಾಕ್ ಮಾಡಿ, ಬಳಿಕ ಸಿಂಟೆಕ್ಸ್ನಲ್ಲಿ ಅಂದಾಜು ೧೦೦ ಲೀಟರ್ ಪೆಟ್ರೋಲ್ ತುಂಬಿ, ೨ ಎಚ್‌ಪಿ ಮೋಟಾರ್ ಮೂಲಕ ಶೆಡ್‌ಗೆ ಸ್ಪ್ರೇ ಮಾಡಿ, ಬೆಂಕಿ ಹಚ್ಚಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದ್ದು, ಒಳಗಡೆ ಮಲಗಿದ್ದ ತಾಯಿ ಜೈನಾಬಿ ಹಾಗೂ ಮಗಳು ಶಭಾನಾ ಸಜೀವ ದಹನಗೊಂಡು ಸುಟ್ಟು ಕರಕಲಾಗಿದ್ದಾರೆ. ಪೆಟ್ರೋಲ್ ವಾಸನೆ ಬಡಿದಿದ್ದರಿಂದ ಸಿದ್ದಕಿ ಎನ್ನುವವರು ಹೊರಗಡೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಇನ್ನು ದಸ್ತಗೀರಸಾಬ್ ಹಾಗೂ ಸುಭಾನ್ ಅವರಿಗೆ ಗಂಭೀರವಾಗಿ ಸುಟ್ಟಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿಗಳು
ಇನ್ನು ಹುನಗುಂದ ತಾಲೂಕಿನ ಬೆಳಗಲ್ ಕ್ರಾಸ್ ನಲ್ಲಿ ಎರಡು ಲಾರಿಗಳು ಹೆದ್ದಾರಿಯಲ್ಲಿ ಹೊತ್ತಿ ಉರಿದಿದ್ದು ಹಿಂದಿನ ಲಾರಿಯಲ್ಲಿದ್ದ ಚಾಲಕ ಮಧ್ಯಪ್ರದೇಶದ ಕೈಲಾಸ್ ಎನ್ನುವ ವ್ಯಕ್ತಿ ಸಜೀವ ದಹನವಾಗಿದ್ದಾನೆ. ಮೊದಲು ಅವಘಡದಲ್ಲಿ ಒಬ್ಬನೆ ಸಜೀವ ದಹನವಾಗಿದ್ದಾನೆ ಎನ್ನಲಾಗಿತ್ತು. ಆದರೆ, ಸ್ಥಳಕ್ಕೆ ಭೇಟಿ ನೀಡಿದ ಅಪರಾಧ ಕೃತ್ಯ ಸ್ಥಳ ಪರಿಶೋಧನಾ ಅಽಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಸುಟ್ಟು ಬೂದಿಯಂತೆ ಆಗಿದ್ದ ದೇಹವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಅಲ್ಲಿ ಇಬ್ಬರು ಸಜೀವ ದಹನವಾಗಿರುವುದು ಸ್ಪಷ್ಟಗೊಂಡಿದೆ.

ಬೆಳಗಿನ ಜಾವ ೨ ಗಂಟೆಯ ವೇಳೆಗೆ ಇಳಕಲ್ಲ ನಗರದ ಕಡೆಯಿಂದ ವಿಜಯಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದ ರಾಜಸ್ತಾನ ಮೂಲದ ಲಾರಿಗೆ ಹಿಂದಿನಿಂದ ಬಂದ ನಾಗಾಲ್ಯಾಂಡ್ ಮೂಲದ ಲಾರಿ ಗುದ್ದಿದೆ. ಈ ವೇಳೆ ಲಾರಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಕೆನ್ನಾಲಿಗೆ ಚಾಚಿದೆ. ಹಿಂದಿನ ಲಾರಿಯಲ್ಲಿ ಇದ್ದ ಚಾಲಕ ಹಾಗೂ ಮತ್ತೊಬ್ಬ ಹೊರಗೆ ಬರಲಾಗದೇ ಸಜೀವವಾಗಿ ದಹನವಾಗಿದ್ದಾರೆ. ಮುಂದಿನ ಲಾರಿಯಲ್ಲಿ ಇದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಓರ್ವ ಮೃತನ ಹೆಸರು ಮತ್ತು ರಾಜ್ಯ ಮಾತ್ರ ಗೊತ್ತಾಗಿದ್ದು, ಮತ್ತೊಬ್ಬನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೃತ ವ್ಯಕ್ತಿಯ ಕುಟುಂಬದವರು ಬಂದ ಬಳಿಕವೇ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ಹೇಳುತ್ತಾರೆ. ಹುನಗುಂದ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹುನಗುಂದ ಸಿಪಿಐ ಸುನೀಲ ಸವದಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಬೆಳಗಲಿ ಗ್ರಾಮದ ಜಮೀನಿನ ಶೆಡ್‌ಗೆ ಬೆಂಕಿ ಹಚ್ಚಿ ಇಬ್ಬರು ಸಜೀವ ದಹನಕ್ಕೆ ಕಾರಣವಾಗಿರುವ ಆರೋಪದ ಮೇಲೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅನೈತಿಕ ಸಂಬಂಧ ಅಥವಾ ಹಣಕಾಸಿನ ವ್ಯವಹಾರ ಈ ಕೃತ್ಯಕ್ಕೆ ಕಾರಣ ಎಂದು ಸದ್ಯಕ್ಕೆ ತಿಳಿದು ಬಂದಿದೆ. ಪ್ರಕರಣದ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇನ್ನು ಬೆಳಗಲ್ಲ ಕ್ರಾಸ್ ನಲ್ಲಿ ನಡೆದ ಎರಡು ಲಾರಿಗಳ ಧಗಧಗಿಸಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net