ಎರಡು ಟಗರು, 8 ಜನ ಆರೋಪಿಗಳ ಬಂಧನ

26-RNR-06
Published on

ರಾಣೆಬೆನ್ನೂರ: ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಟಗರಿನ ಕಾಳಗ ನಡೆಸುತ್ತಿದ್ದ ಆರೋಪದಡಿ ಎಂಟು ಯುವಕರು ಹಾಗೂ ಎರಡು ಟಗರುಗಳನ್ನು ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಹಾವೇರಿ, ರಾಣೆಬೆನ್ನೂರ, ಹರಿಹರ ಹಾಗೂ ದಾವಣಗೆರೆಯಿಂದ ಬಂದಿದ್ದ ಯುವಕರ ತಂಡ ಟಗರಿನ ಕಾಳಗ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪಿಎಸ್​ಐ ಮೇಘರಾಜ ಹಾಗೂ ತಂಡದವರು ಟಗರು ಮತ್ತು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಯುವಕರಿಂದ ಪ್ರತಿಭಟನೆ...
ಟಗರಿನ ಕಾಳಗದಲ್ಲಿ ಇಲ್ಲದ ಒಬ್ಬ ಯುವಕನನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಕೂಡಲೆ ಆತನನ್ನು ಬಿಡುಗಡೆ ಮಾಡಬೇಕು ಎಂದು ನಗರ ಕುರುಬಗೇರಿ ಯುವಕರು ಪ್ರತಿಭಟನೆ ನಡೆಸಿದರು. ಈ ವಿಚಾರವಾಗಿ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಹಾಗೂ ಪಿಎಸ್​ಐ ಮೇಘರಾಜ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಹೀಗಾಗಿ ಗ್ರಾಮೀಣ ಠಾಣೆ ಎದುರು ಒಂದು ಗಂಟೆಗೂ ಅಧಿಕ ಕಾಲ ಬಿಗುವಿನ ವಾತಾವರಣ ನಿರ್ವಣವಾಗಿತ್ತು. ಸ್ಥಳಕ್ಕೆ ಬಂದ ಸಿಪಿಐ ಸುರೇಶ ಸಗರಿ ಹಾಗೂ ಬಿಜೆಪಿ ಮುಖಂಡರು ಸಮಸ್ಯೆ ಬಗೆಹರಿಸಿ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net