ಎಪಿಎಂಸಿಯಲ್ಲಿ ಜ್ವರ ತಪಾಸಣೆ, ಸ್ಯಾನಿಟೈಸರ್ ವ್ಯವಸ್ಥೆ

6-hvr-05
Published on

ಹಾವೇರಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವುದರಿಂದ ಎಪಿಎಂಸಿಗೆ ಬರುವ ರೈತರು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಸೋಂಕು ಹರಡುವುದನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಸೋಮವಾರದಿಂದ ಹಾನಗಲ್ಲ ರಸ್ತೆಯಲ್ಲಿರುವ ಎಪಿಎಂಸಿಯ ತರಕಾರಿ ಹಾಗೂ ಕಾಳುಕಡಿ ಮಾರುಕಟ್ಟೆಯಲ್ಲಿ ಜ್ವರ ತಪಾಸಣೆ ಹಾಗೂ ಕೈಗೆ ಸ್ಯಾನಿಟೈಸರ್ ಹಾಕುವ ಪ್ರಕ್ರಿಯೆ ಆರಂಭಿಸಲಾಯಿತು.

ಎಪಿಎಂಸಿಯ ಮೂರು ಮುಖ್ಯದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಿ, ಜ್ವರದ ಲಕ್ಷಣವಿರುವವರನ್ನು ಮಾರುಕಟ್ಟೆಗೆ ಬರದಂತೆ ತಡೆಯಲಾಗುತ್ತಿದೆ. ಅಲ್ಲದೆ, ಮಾರುಕಟ್ಟೆಯೊಳಗೆ ಹೋಗುವ ಪ್ರತಿಯೊಬ್ಬರ ಕೈಗೆ ಸ್ಯಾನಿಟೈಸರ್ ಹಾಕಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ.

ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಮಾತನಾಡಿ, ಎಪಿಎಂಸಿಗೆ ನಿತ್ಯ ಹತ್ತಾರು ಹಳ್ಳಿಗಳಿಂದ ರೈತರು, ಸಾರ್ವಜನಿಕರು ಬರುತ್ತಾರೆ. ಈ ಸಮಯದಲ್ಲಿ ಆಕಸ್ಮಿಕವಾಗಿ ಸೋಂಕಿತರು ಬಂದು ಹೋದರೆ ಆತಂಕ ಮನೆ ಮಾಡುತ್ತದೆ. ಸುರಕ್ಷತಾ ಕ್ರಮವಾಗಿ ಎಪಿಎಂಸಿಯನ್ನು ಸೀಲ್​ಡೌನ್ ಮಾಡಬಹುದು. ಇದರಿಂದ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ತೊಂದರೆಯಾಗಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜನತೆಗೆ ಕರೊನಾ ಮಹಾಮಾರಿ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಬೇಕು ಎಂದರು.

ನಂತರ ಎಪಿಎಂಸಿಯ ತರಕಾರಿ ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ ಅಧ್ಯಕ್ಷರು, ‘ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ಖರೀದಿದಾರರು, ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು’ ಎಂದು ವಿನಂತಿಸಿದರು. ಸದಸ್ಯರಾದ ವಿರೂಪಾಕ್ಷಪ್ಪ ಬಣಕಾರ, ಶೇಖರಗೌಡ ಗಾಜಿಗೌಡ್ರ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯ್ಕ, ಛತ್ರದಮಠ ಹಾಗೂ ಎಪಿಎಂಸಿ ಸಿಬ್ಬಂದಿ, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಂಭಣ್ಣ ಹಂದ್ರಾಳ, ಉಪಾಧ್ಯಕ್ಷ ರಫೀಕ್ ದೊಡ್ಡಮನಿ, ಖಜಾಂಚಿ ಮಂಜುನಾಥ ಉಪ್ಪಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net