

ಹಿರೇಕೆರೂರ: ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೂ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ರಾಜ್ಯದ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದಿಂದ 30 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಕೃಷಿ ಭವನ ಕಟ್ಟಡ, 13.35 ಕೋ.ರೂ. ವೆಚ್ಚದ ತಾಲೂಕಿನ ಹಿರೇಕೊಣ್ತಿ, ಮಡ್ಲೂರು, ನಿಟ್ಟೂರು, ಕಚವಿ, ಸೇರಿ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸ್ವತಂತ್ರರಾಗಿದ್ದಾರೆ. ಎಪಿಎಂಎಸಿ ಹೊಸ ಕಾಯ್ದೆ ರೈತರಿಗೆ ವರದಾನವಾಗಲಿದೆ. ಇದನ್ನು ತಿಳಿದುಕೊಳ್ಳದ ಪ್ರತಿಪಕ್ಷಗಳ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೂ ತಲಾ 5 ಸಾವಿರ ರೂ., ಪ್ರೋತ್ಸಾಹ ಧನ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೆಗೆದುಕೊಂಡ ತೀರ್ಮಾನ ರಾಜ್ಯದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ. ಈ ಕಾರಣಕ್ಕಾಗಿ ಸಮಸ್ತ ರೈತರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಾಪಂ ಅಧ್ಯಕ್ಷ ರಾಜು ಬಣಕಾರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಅಶೋಕ ಜಾಡಬಂದಿ, ರೈತ ಮುಖಂಡ ಸೋಮಶೇಖರಪ್ಪ ಚಪ್ಪರದಹಳ್ಳಿ, ಎನ್.ಎಸ್. ಚಿಕ್ಕನರಗುಂದಮಠ, ರೇವಣೆಪ್ಪ ತಂಬಾಕದ, ಮಹೇಶ ದೊಡ್ಡಮನಿ, ಕರಬಸಪ್ಪ ಕುಸಗೂರು, ಹನುಮಗೌಡ ಕೋಡಿಗೌಡ್ರ, ಶಂಕ್ರಪ್ಪ ಹುಲ್ಲತ್ತಿ, ಸಿದ್ದಪ್ಪ ದಾನಪ್ಪನವರ ಇತರರು ಇದ್ದರು. ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ, ತಾಂತ್ರಿಕ ವ್ಯವಸ್ಥಾಪಕ ಮಾರುತಿ ಅಂಗರಗಟ್ಟಿ ನಿರ್ವಹಿಸಿದರು.