ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ

15M.D.R.4
Published on

ಮದ್ದೂರು: ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರು ಕಾರ್ಖಾನೆಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ಮಾಡಿದರು.

ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಸೀತಾರಾಮು ಮಾತನಾಡಿ, ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೆ 15 ರಿಂದ 16 ತಿಂಗಳು ಕಳೆದರೂ ರೈತರನ್ನು ಸತಾಯಿಸುತ್ತಿರುವ ಧೋರಣೆ ಕೈ ಬಿಡಬೇಕು. ಕಬ್ಬು ಕಟಾವಿನ ದರ ಟನ್‌ಗೆ 1200 ರೂ.ನಿಂದ 1400 ರೂ.ಗೆ ಹೆಚ್ಚಿಸುತ್ತಿರುವುದು ಕೈಬಿಟ್ಟು 450 ರೂ.ಗೆ ಮೀರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಚ್ಚಾದರೆ ಕಾರ್ಖಾನೆಯವರೇ ಈ ದರವನ್ನು ಭರಿಸಬೇಕು. ಹಿರಿತನದ ಆಧಾರದ ಮೇಲೆ ರೈತರ ಕಬ್ಬು ಕಡಿಯಲು ಸೂಚಿಸಬೇಕು. ಪರ್ಮಿಟ್ ಕೊಟ್ಟಿರುವ ಕಬ್ಬನ್ನು ಮೊದಲು ಕಡಿಯಬೇಕು. ಬಳ್ಳಾರಿ ಹಾಗೂ ಮಹಾರಾಷ್ಟ್ರದ ಕಾರ್ಮಿರನ್ನು ವಾಪಸ್ ಕರೆಸಿ ವಾರದೊಳಗೆ ಕಾರ್ಖಾನೆಯ ವ್ಯಾಪ್ತಿಯ ಎಲ್ಲ ಕಬ್ಬು ಕಡಿದು ಸಾಗಿಸಬೇಕು ಎಂದು ಒತ್ತಾಯಿಸಿದರು.

ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಾಕಿ ಹಣವನ್ನು ವಿಳಂಬ ಮಾಡುತ್ತಿರುವುದನ್ನು ಕೈ ಬಿಟ್ಟು 15 ದಿನದೊಳಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ 150 ರೂ.ಕಬ್ಬಿನ ಬಾಕಿ ಹಣವನ್ನು ನ್ಯಾಯಾಲಯದ ತೀರ್ಮಾನದಂತೆ ರೈತರಿಗೆ ತಕ್ಷಣ ಪಾವತಿಸಬೇಕು. ಕಾರ್ಖಾನೆಯ ಕಾರ್ಮಿಕರಿಗೆ 1 ಕೆಜಿಗೆ 25 ರೂ.ನಂತೆ ಸಕ್ಕರೆಗೆ ವಿತರಿಸುತ್ತಿದ್ದು ಅದೇ ದರದಲ್ಲಿ ಕಬ್ಬು ಬೆಳೆಗಾರರಿಗೂ ಕೆಜಿಗೆ 25 ರೂ.ನಂತೆ ವಿತರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಆವರಣದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರರಾವ್, ಅಧಿಕಾರಿಗಳಾದ ಪರಿಮಳ ರಂಗನ್, ಗೌರಿ ಪ್ರಕಾಶ್, ಕಟ್ಟಿ ಆಗಮಿಸಿ ನಿಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆ ಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ರೈತ ಮುಖಂಡರಾದ ಸೊ.ಸಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಲಿಂಗರಾಜು, ನಿಂಗೇಗೌಡ, ರಾಮಣ್ಣ, ಪುಟ್ಟಸ್ವಾಮಿ, ಗೌಡಯ್ಯ, ಉಮೇಶ್, ಹುಚ್ಚೇಗೌಡ, ಮಹೇಶ್, ಜಯರಾಮ್, ಅಶೋಕ, ಶಿವರಾಮು, ಎಂ.ಸಿ.ರಾಜೇಶ್, ದಯಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net