ಜಯವಾಣಿ ಸುದ್ದಿಜಾಲ ಕಾರವಾರ
ಎನ್‌ಸಿಸಿಯಲ್ಲಿ `ಸಿ' ಪ್ರಮಾಣಪತ್ರ ಪಡೆದವರಿಗೆ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ನೇರವಾಗಿ ಸಂದರ್ಶನಕ್ಕೆ ಹಾಜರಾಗುವ ಅವಕಾಶವಿದೆ ಎಂದು ಕದಂಬ ನೌಕಾನೆಲೆಯ ಕಮೊಡೋರ್ ವಿವೇಕ ಹೊಟ್ಟಿ ಹೇಳಿದರು.
ಕರ್ನಾಟಕ-ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನಿಂದ ಇಲ್ಲಿನ ದೇವಬಾಗ ಜೆತ್ನಾ ಕೇಂದ್ರದಲ್ಲಿ ಆಯೋಜಿಸಿರುವ 10 ದಿನದ ನಾವಿಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್‌ಸಿಸಿಯಲ್ಲಿ ತರಬೇತಿ ಪಡೆದವರಿಗೆ ಶಿಸ್ತು, ಸಂಯಮ ಮುಂತಾದ ಗುಣಗಳು ಬರುತ್ತವೆ. ನಡುವೆ ಬಿಡದೇ ಕನಿಷ್ಠ `ಸಿ' ಸರ್ಟಿಫಿಕೇಟ್ ಪಡೆದುಕೊಳ್ಳಿ ಎಂದರು. ಇದು ವಿದ್ಯಾರ್ಥಿಗಳಿಗೆ ಸಿಗುವ ಅತಿ ಅಪರೂಪದ ಅವಕಾಶ ಈ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಎನ್‌ಸಿಸಿ ಕಾರವಾರ ಘಟಕದ ಮುಖ್ಯಸ್ಥ ಕಮಾಂಡರ್ ಸತ್ಯನಾಥ ಭೋಸ್ಲೆ ಮಾತನಾಡಿ, ಕಾರವಾರದಲ್ಲಿ ಮೊದಲ ಬಾರಿಗೆ ಎನ್‌ಸಿಸಿ ನಾವಿಕ ತರಬೇತಿ ಶಿಬಿರ ಆಯೋಜಿಸಲಾಗಿದೆ. ಅಕ್ಟೋಬರ್ 2 ರವರೆಗೆ ಶಿಬಿರ ನಡೆಯಲಿದ್ದು, ಡಿಕೆವಿಲ್ಲಾರ್ ಬೋಟ್‌ಗಳನ್ನು ನಡೆಸುವುದು, ಅವುಗಳನ್ನು ನೀರಿಗೆ ಇಳಿಸುವುದು ಹಾಯಿಗಳನ್ನು ಕಟ್ಟುವುದು ಮುಂತಾದ ತರಬೇತಿ ನೀಡಲಾಗುವುದು. ಪ್ರತಿ ಕೆಡೆಟ್ ಶಿಬಿರದ ಅಂತ್ಯದವರೆಗೆ ಸುಮಾರು 200 ಕಿಮೀ ದೋಣಿ ಯಾನ ನಡೆಸುತ್ತಾನೆ ಎಂದರು. ಗೋವಾ ಎನ್‌ಸಿಸಿ ಘಟಕದ ಮುಖ್ಯಸ್ಥ ಕಮಾಂಡರ್ ರಿಜಿ ಕೆ.ಕೃಷ್ಣನ್, ಭಾರತಿ ಕುಮಾರ್ ಇದ್ದರು.
ಶಿಬಿರದಲ್ಲಿ ಬೆಂಗಳೂರು, ಮೈಸೂರು ಉಡುಪಿ, ಮಂಗಳೂರು, ಕಾರವಾರ ಹಾಗೂ ಗೋವಾ ನೌಕಾ ಎನ್‌ಸಿಸಿ ಘಟಕಗಳ ಒಟ್ಟು 60 ಕೆಡೆಟ್‌ಗಳು ಭಾಗವಹಿಸಿದ್ದಾರೆ. ಪದವಿ, ಪಿಯು, ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ವಿಷಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿದ್ದು, ಎನ್‌ಸಿಸಿ ಎರಡನೇ ವರ್ಷದ ಕೆಡೆಗಳಾಗಿದ್ದಾರೆ. ಶಿಬಿರದಲ್ಲಿ ಕಾರವಾರ ಕದಂಬ ನೌಕಾಸೇನೆಯ ಯುದ್ಧ ನೌಕೆಗೆ ಭೇಟಿ, ಸೈಕ್ಲಿಂಗ್, ಟ್ರಕ್ಕಿಂಗ್ ಮುಂತಾದ ಚಟುವಳಿಕೆಗಳನ್ನೂ ನಡೆಸಲಾಗುತ್ತದೆ.