ಎಡಿಎಲ್‌ಆರ್ ಅಧಿಕಾರಿಗೆ ೇರಾವ್

SRP_20-02jpj
Published on

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಸರ್ಕಾರಿ ಭೂಮಿ ಲೂಟಿ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ರೈತ ಹೋರಾಟಗಾರರೊಂದಿಗೆ ಲಘುವಾಗಿ ವರ್ತಿಸಿದ ಎಡಿಎಲ್‌ಆರ್ ಅಧಿಕಾರಿಗೆ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ೇರಾವ್ ಹಾಕಿ ತರಾಟೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗವಾರ ಈ ಘಟನೆ ನಡೆದಿದ್ದು, ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಏಕಾಏಕಿ ಧರಣಿ ಕುಳಿತು ಎಡಿಎಲ್‌ಆರ್ ಅಧಿಕಾರಿ ಮೇಘಾ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ತಾಲೂಕು ಮೈಸೂರು ನಗರಕ್ಕೆ ಸಮೀಪವಿದ್ದು ತಾಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಬೀಚನಕುಪ್ಪೆ ಸರ್ವೇ ನಂ.76ರಲ್ಲಿ ಯಾವುದೇ ಸೂಕ್ತ ದಾಖಲೆಗಳು ಹೊಂದದೆ ನಕಲಿ ದಾಖಲೆಗಳ ಮೂಲಕ 50 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಭೂಮಾಫಿಯಾದವರು ಅಕ್ರಮವಾಗಿ ಲೂಟಿ ಮಾಡಿದ್ದಾರೆ. ಸರ್ವೇ ಅಧಿಕಾರಿಗಳು ಸಹ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದು ಕೇವಲ ಪಹಣಿ ಪತ್ರದ ಆಧಾರದ ಮೇಲೆ ಹದ್ದುಬಸ್ತು ಮಾಡಿಕೊಡಲು ಮುಂದಾಗಿದ್ದಾರೆ. ಇದೇ ರೀತಿ ಕಸಬಾ ಹೋಬಳಿ ಬೆಳವಾಡಿ ಗ್ರಾಮದ ಸರ್ವೇ ನಂ.64ರಲ್ಲಿನ ಅರಣ್ಯ ಪ್ರದೇಶ ಎಂದು ಉಲ್ಲೇಖವಿರುವ 24 ಎಕರೆಯಷ್ಟು ಭೂಮಿ ಈಗ ಮಾಯಾವಾಗಿದ್ದು, ಖಾಸಗಿ ಲೇಔಟ್‌ಗಳು ಅಕ್ರಮವಾಗಿ ನಿರ್ಮಾಣಗೊಳ್ಳುತ್ತಿವೆ ಎಂದು ದೂರಿದರು.

ಬೀಚನಕುಪ್ಪೆ ಗ್ರಾಮದ ಅಕ್ರಮವನ್ನು ಹೋರಾಟಗಾರರು ಈಗ ಪತ್ತೆಹಚ್ಚಿದ್ದು, ಸಂಬಂಧಪಟ್ಟ ಭೂಮಿಯು ಅಪರಿಚಿತ ವ್ಯಕ್ತಿಗೆ ಸರ್ಕಾರ ಮಂಜೂರು ಮಾಡಿದ ಮಂಜೂರಾತಿ ಪತ್ರ, ಅದರ ನಕ್ಷೆ ಹಾಗೂ ಸ್ಥಳ ಗುರುತು ಮಾಡಿರುವ ದಾಖಲೆಗಳನಿಟ್ಟು ತಾಲೂಕು ಆಡಳಿತದ ಅಧಿಕಾರಿ ಮೇಘಾ ಅವರನ್ನು ಪ್ರಶ್ನಿಸಿದರೆ ಲಘುವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನಾಕಾರರ ಮನವಿ ಆಲಿಸಿದ ಎಡಿಎಲ್‌ಆರ್ ಮೇಘಾ ಮಾತನಾಡಿ, ಬುಧವಾರ ಸಂಬಂಧಪಟ್ಟ ವಿವಾದಿತ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಸರ್ವೇಯರ್ ಅವರಿಂದ ಮಾಹಿತಿ ಕೊಡಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಕಾರ್ಯಕರ್ತರಾದ ಹೆಬ್ಬಾಡಿ ಸಿದ್ದೇಗೌಡ, ಸುರೇಶ್, ಕಡತನಾಳು ಬಾಬು, ಕೆಂಪೇಗೌಡ, ಶಂಕರೇಗೌಡ, ಮಹೇಶ್, ಶಿವರಾಜು, ನಿಂಗೇಗೌಡ, ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net