

ಶ್ರೀರಂಗಪಟ್ಟಣ: ತಾಲೂಕಿನ ಮೈಸೂರು ಮಹಾನಗರಕ್ಕೆ ಸಮೀಪದ ವಿವಿಧ ಹೋಬಳಿಗಳ ಗಡಿಗ್ರಾಮಗಳಲ್ಲಿ ಸರ್ಕಾರಿ ಭೂಮಿ, ಗೋಮಾಳ ಹಾಗೂ ಅರಣ್ಯ ಪ್ರದೇಶ ಭೂ ಮಾಫಿಯಾದಿಂದ ಲೂಟಿಯಾಗುತ್ತಿರುವುದು ಸತ್ಯ ಎಂಬುದು ಒಪ್ಪಿಕೊಳ್ಳಿ ಎಂದು ಎಡಿಎಲ್‌ಆರ್ ಅಧಿಕಾರಿ ಮೇಘಾ ಅವರಿಗೆ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ, ಬೀಚನಕುಪ್ಪೆ ಗ್ರಾಮದಲ್ಲಿ 50ರಿಂದ 70 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆಗಳ ಮೂಲಕ ಕಬಳಿಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರರಿಗೆ ಗೊಂದಲದ ಹೇಳಿಕೆ ನೀಡಿದ ಎಡಿಎಲ್‌ಆರ್ ಮೇಘಾ ಅವರ ವಿರುದ್ಧ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಬೀಚನಕುಪ್ಪೆಯ ಸರ್ವೇನಂ.76ರ ಸರ್ಕಾರಿ ಭೂಮಿಗೆ ಖಾಸಗಿ ವ್ಯಕ್ತಿಗಳು ನೀಡಿದ್ದ ಅಧಿಕೃತ ದಾಖಲೆಗಳ ಕುರಿತು ಸರಿಯಾದ ಮಾಹಿತಿ ನೀಡಲು ಹಿಂದೇಟು ಹಾಕಿದ ಎಡಿಎಲ್‌ಆರ್ ಅಧಿಕಾರಿ ಮೇಘಾ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರು ಇಂತಹ ಭೂಮಿಗಳ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಮುಂದಿನ ಕ್ರಮಕ್ಕೆ ನಮ್ಮ ಇಲಾಖೆಗೆ ವರ್ಗಾಯಿಸಿದ್ದಾರೆ. ಆದರೆ ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ರೈತ ಹೋರಾಟಗಾರರಿಂದ ವಿವಾದಿತ ಸ್ಥಳದ ಕುರಿತು ತಕರಾರು ಅರ್ಜಿ ಬಂದ ಹಿನ್ನೆಲೆ ನಡೆಯುತ್ತಿದ್ದ ಸರ್ವೇ ಕಾರ್ಯ ಸ್ಥಗಿತಗೊಳಿಸಿ, ಈಗ ಮೂಲ ದಾಖಲೆಗಳನ್ನು ನೀಡುವಂತೆ ಪತ್ರ ಬರೆದು ಕೋರಿದ್ದೇನೆ ಎಂದರು.
ಇದರಿಂದ ಕೋಪಗೊಂಡ ಕೆ.ಎಸ್.ನಂಜುಂಡೇಗೌಡ, ಖಾಸಗಿ ವ್ಯಕ್ತಿಗಳು ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿಕೊಂಡ ಮೂಲ ದಾಖಲೆಗಳು, ಸ್ಥಳದ ಸರ್ವೇ, ನಕ್ಷೆ ಇದ್ಯಾವುದನ್ನು ಕಾನೂನು ಬದ್ಧವಾಗಿ ಪರಿಶೀಲಿಸಿಲ್ಲ. ಕೇವಲ ನಕಲಿ ಪಹಣಿ ಆಧಾರದ ಮೇಲೆ ಸ್ಥಳ ಗುರುತಿಸಿ ಹದ್ದುಬಸ್ತು ಮಾಡಿಕೊಡಲು ಆದೇಶ ಪತ್ರಕ್ಕೆ ಸಹಿ ಹಾಕಿ ಕೆಳಹಂತದ ಅಧಿಕಾರಿಗಳಿಗೆ ನೀವು ಹೇಗೆ ಸೂಚನೆ ನೀಡಿದ್ದೀರಿ ಎಂದರು. ಇದರಿಂದ ಅಧಿಕಾರಿ ತಬ್ಬಿಬ್ಬಾಗಿ ಗೊಂದಲದ ಹೇಳಿಕೆ ನೀಡಿ ಮೌನಕ್ಕೆ ಶರಣಾದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ತನಿಖೆಯಾಗಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಕಾರ್ಯಕರ್ತರಾದ ಬಲ್ಲೇನಹಳ್ಳಿ ಮಂಜುನಾಥ್, ಕೆಂಪೇಗೌಡ, ನಿಂಗೇಗೌಡ, ಶಂಕರೇಗೌಡ , ಮಹೇಶ್, ಶಿವರಾಜು, ರಾಮಕೃಷ್ಣ ಭಾಗವಹಿಸಿದ್ದರು.