ಎಚ್‌ಡಿಡಿ, ಎಚ್‌ಡಿಕೆ ನಾಯಕತ್ವ ಕ್ಷೀಣ ; ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ; ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆ

CPT
Published on

ಚನ್ನಪಟ್ಟಣ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕುಟುಕಿದರು.

ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವೇಗೌಡರ ನಾಯಕತ್ವ, ಅವರು ಹುಟ್ಟುಹಾಕಿದ ಪಕ್ಷ ಜೆಡಿಎಸ್. ದೇವೇಗೌಡರಿಗೆ ವಯಸ್ಸಹಜದ ಕಾರಣ ಪಕ್ಷ ಮುನ್ನಡೆಸಲು ಸಾಧ್ಯ ಆಗುತ್ತಿಲ್ಲ. ಜೆಡಿಎಸ್‌ನಲ್ಲಿ ಈಗ ಪರ್ಯಾಯ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದರು.

ಸಮುದಾಯ ತೀರ್ಮಾನ: ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಜನ ಪರ್ಯಾಯವಾಗಿ ನಾಯಕತ್ವ ಹುಡುಕುತ್ತಿದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೊಣ. ದೇವೇಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಸಮುದಾಯ ತೀರ್ಮಾನ ಮಾಡಿದೆ. ಈ ಚುನಾವಣೆ ಫಲಿತಾಂಶದಿಂದಲೇ ಅದು ಗೊತ್ತಾಗಿದೆ ಎಂದು ಸಿಪಿವೈ ಅಭಿಪ್ರಾಯಪಟ್ಟರು.

ಅವರ ಕುಟುಂಬದಲ್ಲಿ ನಡೆದಿರೋ ಹಲವು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಎಂದರು.

ಇಡೀ ಕುಟುಂಬವೇ ನನ್ನ ವಿರುದ್ಧ ಹೋರಾಟ ಮಾಡಿತು. ಆದರೂ, ಚನ್ನಪಟ್ಟಣ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರುವ ಕಾರ್ಯಕರ್ತರು ಹಾಗೂ ಬಹಳ ಜನ ಶಾಸಕರು ನೊಂದಿದ್ದಾರೆ. ಇಡೀ ಕುಟುಂಬ ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿತು. ನಮ್ಮ ಸರ್ಕಾರ ಸುಭದ್ರವಾಗಿದೆ. 136 ಇತ್ತು ಈಗ 139 ಆಗಿದೆ. ಜೆಡಿಎಸ್ ನಶಿಸಿ ಹೋಗುತ್ತಿದೆ. ಪಕ್ಷ ನಶಿಸಿಹೋದಾಗ ಶಾಸಕರು ಬೇರೆ ಕಡೆ ಮುಖ ಮಾಡೋದು ಸಹಜ ಎಂದರು.

ನನ್ನ ಪೂರ್ತಿ ಸಮಯನ್ನು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟು ದುಡಿಯುತ್ತೇನೆ ಎಂದರು.

ದೇವೇಗೌಡರಿಗೆ ಗೌರವ ಕೊಡಲಿಲ್ಲ

ದೇವೇಗೌಡರು ಹಳ್ಳಿ ಹಳ್ಳಿಗೆ ಬಂದು ಪ್ರಚಾರ ಮಾಡಿದ್ರಲ್ಲ ಏನಾಯ್ತು?, ಜನ ಅವರಿಗೆ ಗೌರವ ಕೊಡಲಿಲ್ಲ. ಸಮುದಾಯ ಬೆಂಬಲ ಕೊಡಲಿಲ್ಲ. ಅವರ ಕುಟುಂಬ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಇಡೀ ಕುಟುಂಬ ಎಲ್ಲ ಒಕ್ಕಲಿಗ ಶಕ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡಿದೆ ಎಂದು ಸಿಪಿವೈ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಏಕೆ ಈ ಸಮಾಜದ ಶಕ್ತಿ ಬಳಸಿಕೊಂಡು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ತೀರಾ..? ಎಂದು ಪ್ರಶ್ನಿಸಿದರು.

ಪಿತೂರಿಯಿಂದ ಆಚೆ ಬಂದೆ : ಯೋಗೇಶ್ವರ್ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೆಯೇ ಎಂಬ ಚರ್ಚೆಯ ವಿಚಾರಕ್ಕೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ, ಬಿಜೆಪಿಯಿಂದ ಆಚೆ ತಳ್ಳಲ್ಪಟ್ಟಿದ್ದವನು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾನೇನು ಅಲ್ಲಿಂದ, ಇಲ್ಲಿಂದ ಹಾರೋನು ಅಲ್ಲ. ಅನಿವಾರ್ಯ, ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿದೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು. ನಾನು ಪಕ್ಕಾ ಕಾಂಗ್ರೆಸ್ಸಿಗ,. ನಾನು ಪಕ್ಷ ಬಿಡೊಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.

ಕುರುಕ್ಷೇತ್ರದ ಕಥೆ ರೀತಿ ಬಬ್ರ್ರುವಾಹನ ಹೇಳ್ತಾನಲ್ಲ, ಮಗನನ್ನು ಯುದ್ದ ಭೂಮಿಗೆ ಕಳಿಸಿ ನೀನು ರಣಹೇಡಿ ಆಗ್ಬಿಟ್ಟೆ ಅಂತಾ. ಇವತ್ತು ಕುಮಾರಸ್ವಾಮಿಗೆ ಅದೇ ಪರಿಸ್ಥಿತಿ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ? ಕುಮಾರಸ್ವಾಮಿಗೆ ಭಂಡತನ. ಅವರಿಗೆ ಇದ್ದರೆ ಈ ಊರು, ಬಿಟ್ಟರೆ ಇನ್ನೊಂದು ಊರು. ಸಿ.ಪಿ.ಯೋಗೇಶ್ವರ್, ಚುನಾಯಿತ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net