

ಚನ್ನಪಟ್ಟಣ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಿಮ್ಮದು ಟೂರಿಂಗ್ ಟಾಕೀಸ್ ರಾಜಕಾರಣ. ಮಧುಗಿರಿ, ಮಂಡ್ಯ, ಚಿಕ್ಕಬಳ್ಳಾಪುರ, ರಾಮನಗರ, ಚನ್ನಪಟ್ಟಣ ಎಲ್ಲ ಕಡೆ ಹೋಗಿರುವುದೇ ಇದಕ್ಕೆ ಸಾಕ್ಷಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಛೇಡಿಸಿದರು.
ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿ, ಮೇಕೆದಾಟುಗೆ ಅನುಮತಿ ಕೊಡಿಸುತ್ತೇನೆ ಎಂದಿದ್ದ ಕುಮಾರಸ್ವಾಮಿ ಅವರೇ ಅನುಮತಿ ಕೊಡಿಸಿದ್ರ? ರಾಜ್ಯದ ಜನ ಇವರ ನವರಂಗಿ ಬಣ್ಣ ನೋಡಬೇಕು. ಹಾಗಾಗಿ, ಮಂಡ್ಯ ಸಮಾವೇಶದಲ್ಲಿ ದೊಡ್ಡ ಸ್ಕ್ರೀನ್ ಹಾಕಿ ಇವರು ಹೇಳಿರೋ ಸ್ಟೇಟ್ ಮೆಂಟ್ ಹಾಕಿಸುತ್ತೇನೆ ಎಂದರು.
ಹಾಸನದಲ್ಲಿ ನಿಮ್ಮ ಅಣ್ಣನ ಮಕ್ಕಳ ಹಗರಣ ನಡೀತಲ್ಲ, ಏಕೆ ಬಿಜೆಪಿಯವರು ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಪಾಪ ಆ ಹೆಣ್ಣ್ಮುಕ್ಕಳ ಜೀವನ ಹಾಳು ಮಾಡಿದ್ದು ಯಾರು ಅನ್ನೋದು ಹೇಳಬೇಕಲ್ವಾ..? ನಿಮ್ಮ ಅಂಗಡಿ ಬಗ್ಗೆ ನನಗೆ ಎಲ್ಲ ಗೊತ್ತಿದೆ ಎಂದರು.
ಪಾದಯಾತ್ರೆಗೆ ಲೇವಡಿ: ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಮೈಸೂರು ಚಲೋ ಪಾದಯಾತ್ರೆಯ ಉದ್ದಕ್ಕೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಪಾದಯಾತ್ರೆ ಬೇಡ ಅಂದವರು ಪೋಟೋದಲ್ಲಿ ಮುಂದೆ ನಿಂತಿದ್ದಾರೆ. ಪಾದಯಾತ್ರೆ ಮಾಡಲೇಬೇಕು ಅಂತಿದ್ದ ಬಿಜೆಪಿ ಅಧ್ಯಕ್ಷರು ಹಿಂದೆ ನಿಂತಿದ್ದಾರೆ. ಇದರ ಅರ್ಥ ಏನು ಎಂದು ಬಿಜೆಪಿ ನಾಯಕರು ಹೇಳಬೇಕು. ಬಿಜೆಪಿ ನಾಯಕರಾದ ಯತ್ನಾಳ್ ಅವರೇ ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳು ಪಾದಯಾತ್ರೆ ಮಾಡ್ತಿದ್ದಾರೆ ಎಂದಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ಜನತೆಗೆ ಅಸತ್ಯ ಹೇಳಲು ಪಾದಯಾತ್ರೆ ಮಾಡುತ್ತಿದ್ದೀರಿ ಎಂದರು.
ಈಗಾಗಲೇ ಜನ ನಿಮಗೆ ಬುದ್ಧಿ ಕಲಿಸಿ ಅಧಿಕಾರ ಕಿತ್ತುಕೊಂಡಿದ್ದಾರೆ. ನಿಮ್ಮದು ಶೇ.40 ಭ್ರಷ್ಟಾಚಾರ ಎಂಬುದು ಇಡೀ ದೇಶಕ್ಕೆ ಗೊತ್ತು. ನೀವು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದೀರಿ. ನಿಮ್ಮ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತೀರಾ? ದೇವರಾಜ ಅರಸು ಟ್ರಕ್ ಟರ್ಮಿನಲ್ನಲ್ಲಿ 47 ಕೋಟಿ ರೂ. ಹಗರಣ ಆಗಿದೆ. ಅದರ ಎಂಡಿಯನ್ನು ಬಂಧನ ಮಾಡಲಾಗಿದೆ. 30 ಅಕೌಂಟ್‌ಗೆ ಚೆಕ್ ಮೂಲಕ ಹಣ ಹೋಗಿದೆ. ಭೋವಿ ನಿಗಮದಲ್ಲಿ ಹಗರಣ ಮಾಡಿದ್ದೀರಿ, ಇದರ ಲೆಕ್ಕ ಕೊಡಿ? ಮಾಜಿ ಪ್ರಧಾನಿ ದೇವೇಗೌಡರ ಭೂಕಬಳಿಕೆಯ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇವೆ. ಈ ಹಿಂದೆ ಇದನ್ನು ಪ್ರಕಟಣೆ ಮಾಡಿದ್ದು, ಇದೇ ಬಿಜೆಪಿ ನಾಯಕರು. ದೇವೇಗೌಡರ ಕುಟುಂಬ ಮುಡಾದಲ್ಲಿ 36 ಸೈಟ್ ಪಡೆದಿದೆ. ಇದಕ್ಕೆ ಉತ್ತರ ಕೊಡಿ ಅಂತ ಬಿಜೆಪಿಯವರು ಕೇಳಿದ್ದರು. ಕುಮಾರಸ್ವಾಮಿ ಇದಕ್ಕೆ ನೀವು ಉತ್ತರ ಕೊಡ್ರಿ? ನಿಮಗೆ ಪಾದಯಾತ್ರೆ ಮಾಡಲು ಮಾನ-ಮರ್ಯಾದೆ ಇದ್ಯಾ? ಎಂಟು ಕುಟುಕಿದರು. ಬಿಜೆಪಿ ಸರ್ಕಾರದಲ್ಲಿನ ಹಗರಣಗಳ ಬಗ್ಗೆಯೂ ಮಾಹಿತಿ ಇದ್ದು, ಈ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದರು.
ಯೋಗೇಶ್ವರ್ ಅಣ್ಣ ಎಲ್ಲಿದ್ದೀಯಪ್ಪ??: ನಮ್ಮ ಹಿಂದಿನ ಸರ್ಕಾರ ಬದಲಿಸಲು ಇಲ್ಲಿನ ಯೋಗೇಶ್ವರ್ ದೊಡ್ಡ ಪಾತ್ರ ಮಾಡಿದ್ದರು. ಈಗ ಇಲ್ಲಿ ಯೋಗೇಶ್ವರ್ ಅವರನ್ನೇ ಕರೆಯದೇ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ಅವರ ಒಂದು ಫ್ಲೆಕ್ಸ್ ಕೂಡಾ ಇಲ್ಲ. ಒಂದು ಪೋಟೋ ಇಲ್ಲ, ಪಾಪ ಅವರು ಕಾಣಿಸುತ್ತಲ್ಲೂ ಇಲ್ಲ. ಯೋಗೇಶ್ವರ್ ಅಣ್ಣ ಎಲ್ಲಿದ್ದೀಯಪ್ಪ? ಎಂದು ಪರಮೇಶ್ವರ್ ಛೇಡಿಸಿದರು. ಬಿಜೆಪಿಯಲ್ಲಿ ಯಾವಾಗ ಕೈ ಹಿಡಿತಾರೆ, ಯಾವಾಗ ಕೈ ಬಿಡ್ತಾರೆ ಗೊತ್ತಾಗಲ್ಲ ಎಂದರು.
ಎಚ್‌ಡಿಕೆ ವಿರುದ್ಧ ಜಮೀರ್ ವಾಗ್ದಾಳಿ!: ಸಚಿವ ಜಮೀರ್ ಅಹಮದ್ ಮಾತನಾಡಿ, ಕುಮಾರಸ್ವಾಮಿ ಅವರೇ ರಾಮನಗರದ ಜನ್ಮಕೊಟ್ಟ ಕ್ಷೇತ್ರ ಅಂತೀರಾ. ನಿಮ್ಮ ಅಧಿಕಾರಾವಧಿಯಲ್ಲಿ ರಾಮನಗರದಲ್ಲಿ ಎಷ್ಟು ಮನೆ ಕೊಟ್ಟಿದ್ದೀರಿ.? ನಿಮಗೆ ಓಪನ್ ಚಾಲೆಂಜ್ ಹಾಕ್ತೀನಿ, ನೀವು ಕೇವಲ 330 ಮನೆ ಕೊಟ್ಟಿದ್ದೀರಿ. ನಾವು ಎಷ್ಟು ಮನೆ ಕೊಟ್ಟಿದ್ದೀವಿ ಬನ್ನಿ ಚರ್ಚೆ ಮಾಡೋಣ. ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ರಾಜಕಾರಣಿ. ಕೇವಲ 37 ಸೀಟ್ ಗೆದ್ದು ನಮ್ಮ ಜತೆ ಬಂದಿದ್ದರು. ಅವರನ್ನು ನಂಬಬೇಡಿ ಅಂತ ಕಾಂಗ್ರೆಸ್‌ನವರಿಗೆ ಅವಾಗಲೇ ಹೇಳಿದ್ದೆ. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿ ಫ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ. ಇದನ್ನು ಈ ಹಿಂದೆ ನಾನು ಹೇಳಿದಾಗ ಕೆಲವರು ಕೇಳಲಿಲ್ಲ. ಡಿ.ಕೆ.ಸುರೇಶ್ ಸೋತಿದ್ದು, ನನಗೆ ಹೊಟ್ಟೆ ಉರಿತಿದೆ. ಕ್ಷೇತ್ರದಲ್ಲಿ ಕ್ಲರ್ಕ್ ರೀತಿ ಕೆಲಸ ಮಾಡಿದ್ದಾರೆ. ಡಿ.ಕೆ ಸುರೇಶ್ ಅವರ 1 ಪರ್ಸೆಂಟ್ ಕೆಲಸ ಕುಮಾರಸ್ವಾಮಿ ಮಾಡಿಲ್ಲ. ಕೇವಲ ಡಂಗೂರ ಹೊಡೆದುಕೊಂಡು ಬರುತ್ತಾರೆ ಎಂದು ಕುಟುಕಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಎಂ.ಸಿ.ಸುಧಾಕರ್, ಸಂತೋಷ್ ಲಾಡ್, ತಿಮ್ಮಾಪುರ, ಶಾಸಕರಾದ ವಿನಯ್ ಕುಮಾರ್ ಸೊರಕೆ, ಅರಸೀಕೆರೆ ಶಿವಲಿಂಗೇಗೌಡ, ಮಳ್ಳವಳ್ಳಿ ನರೇಂದ್ರಸ್ವಾಮಿ, ಕದಲೂರು ಉದಯ್, ಮಾಗಡಿಯ ಎಚ್.ಸಿ. ಬಾಲಕೃಷ್ಣ, ಕುಣಿಗಲ್ ಡಾ. ರಂಗನಾಥ್, ಯು.ಬಿ. ವೆಂಕಟೇಶ್, ಎ.ಸಿ.ಶ್ರೀನಿವಾಸ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ಸುಧಾಮದಾಸ್, ಮಾಜಿ ಶಾಸಕರಾದ ಎಚ್.ಎಂ.ರೇವಣ್ಣ, ಸಿ.ಎಂ.ಲಿಂಗಪ್ಪ, ಸೌಮ್ಯರೆಡ್ಡಿ, ಎಂ.ಸಿ.ಅಶ್ವತ್ಥ, ಕೆ.ರಾಜು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬಿಎಂಐಸಿಪಿಐ ಅಧ್ಯಕ್ಷ ರಘುನಂದನ್ ರಾಮಣ್ಣ, ಮುಖಂಡರಾದ ದುಂತೂರು ವಿಶ್ವನಾಥ್, ಬ್ಲಾಕ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್ ಕುಮಾರ್ ಇದ್ದರು.