

ಮಾಗಡಿ : ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ಇನ್ನೂ ಗ್ರಾಮ ಪಂಚಾಯಿತಿ ಸದಸ್ಯರಂತೆ ಆಡುತ್ತಿದ್ದಾರೆ. ಕೇಂದ್ರ ಮಂತ್ರಿಗಳಂತೆ ಇರಬೇಕು. ಆ ಗತ್ತನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.
ತಾಲೂಕಿನ ತಿಪ್ಪಸಂದ್ರ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ 40 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕುಮಾರಸ್ವಾಮಿ ಅವರು ಶನಿವಾರ, ಭಾನುವಾರ ರಾಜ್ಯಕ್ಕೆ ಬಂದು ಗ್ರಾಪಂ ಸದಸ್ಯರಂತೆ ಆಡುತ್ತಾರೆ, ಅವರನ್ನು ಎಲ್ಲಿಗೆ ಕರೆದುಕೊಂಡು ಕೂರಿಸಿದರೂ ಗ್ರಾಪಂ ಸದಸ್ಯರಂತೆ ಮಾತನಾಡುತ್ತಾರೆ ಎಂದರು.
ರಾಜ್ಯ ಸರ್ಕಾರ ಇನ್ನು 10 ತಿಂಗಳು ಉಳಿಯುವುದಿಲ್ಲ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸರ್ಕಾರ ಸುಭದ್ರವಾಗಿರುತ್ತದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಜನಪರವಾದ ಸರ್ಕಾರ ಎಂದು ಜನರು ಪ್ರಶಂಸೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರ ಪತನವಾಗಲು ಸಾಧ್ಯವೇ ಎಂದು ಜೆ.ಎಚ್.ಪಟೇಲ್ ಅವರ ಕಥೆ ಪ್ರಸ್ತಾಪಿಸಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳು ಎಂದಿಗೂ ಸತ್ಯವಾಗಿಲ್ಲ ಎಂದರು.
ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿಯವರು ಗುರಿಯಾಗಿಸಿಕೊಂಡಿದ್ದಾರೆ. ಇದಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶಗಳೆ ಉದಾಹರಣೆ. ಆ ರೀತಿ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾದರೆ, ಅದರ ವಿರುದ್ಧ ಕಾನೂನು ಸಮರ ನಡೆಸಲು ತೀರ್ಮಾನಿಸಲಾಗಿದೆ ಎಂದರು.ವಾಲ್ಮಿಕಿ ಹಗರಣದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಅದರಲ್ಲಿ ಯಾವ ರಾಜಕಾರಣಿಗಳ ಪಾತ್ರ ಇಲ್ಲ ತನಿಖೆ ನಡೆದ ನಂತರ ಏನು ಎಂದು ಗೊತ್ತಾಗಲಿದೆ ಎಂದರು.
ಸಿದ್ದರಾಮಯ್ಯ ಪಾತ್ರ ಇಲ್ಲ : ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ, ಕಾನೂನು ಬದ್ಧವಾಗಿಯೆ ನಡೆದಿದೆ. ನಿವೇಶನ ನೀಡಿ ಮಂಜೂರು ಮಾಡಿ ಎಂದು ಅವರು ಎಲ್ಲಿಗೂ ಅರ್ಜಿ ಹಾಕಿಲ್ಲ. ಅದು ಕಾನೂನು ಬದ್ಧವಾಗಿ ನಡೆದಿದೆ. ಇದನ್ನು ಕಾನೂನು ರೀತಿ ತನಿಖೆಗೆ ನೀಡಿದ್ದಾರೆ. ಕಾನೂನು ಬದ್ಧವಾಗಿದ್ದರೆ ಊರ್ಜಿತವಾಗಲಿದೆ, ಇಲ್ಲದಿದ್ದರೆ ವಜಾ ಆಗಲಿದೆ. ಇದನ್ನು ಪ್ರತಿ ಪಕ್ಷದವರು ವೈಭವೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಬಾಲಕೃಷ್ಣ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯದ ವಿರುದ್ಧ ಜನರಿಗೆ ಮನದಟ್ಟು ಮಾಡಲು ಪ್ರತಿ ತಾಲೂಕಿನಲ್ಲಿ ಜನಾಂದೋಲನಾ ಯಾತ್ರೆ ಮಾಡಲಾಗುತ್ತಿದೆ. ವಿರೋಧ ಪಕ್ಷದವರು ರಾಜಕೀಯ ಗಿಮ್ಮಿಕ್‌ಗಾಗಿ, ಮುಡಾವನ್ನು ಪ್ರಚಾರ ಪಡೆಯಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಜನರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.
ಮಳೆ ಬಂದರೆ ಈಡಿಗರ ಪಾಳ್ಯಕ್ಕೆ ಸಂಪರ್ಕ ಕಡಿತವಾಗುತ್ತಿತ್ತು. ಸಂಪರ್ಕ ಕಲ್ಪಿಸಲು ಕಳೆದ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಂದಿನ ಶಾಸಕ ಎ.ಮಂಜುನಾಥ್ ಅವರು ತೆಪ್ಪದಲ್ಲಿ ಓಡಾಡಿದರು. ಆದರೂ, ಮಾಡಿಸಲು ಸಾಧ್ಯವಾಗಲಿಲ್ಲ. ಈಗ ಡಿ.ಕೆ.ಸುರೇಶ್ ಹಾಗೂ ನಾವು ಸೇರಿ 1.20 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಮಾಡಿಸಲು ಮಂಜೂರು ಮಾಡಿಸಲಾಗಿದೆ. ಬ್ರಿಜ್ ನಂತರ ರಸ್ತೆ ಕಲ್ಪಿಸಲಾಗುವುದು ಎಂದರು.
ಶೀಘ್ರವೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ: ಲೋಕಸಭಾ ಚುನಾವಣೆಯಲ್ಲಿ ಜನರು ನಮ್ಮ ಪಕ್ಷಕ್ಕೆ ಮತ ಹಾಕದಿದ್ದರೂ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವುದಿಲ್ಲ, ಹಣ ಬಂದಿಲ್ಲ ಎಂದು ಯಾರು ಗಾಬರಿಯಾಗುವುದು ಬೇಡ. ಶೀಘ್ರವೇ ಮಹಿಳೆಯರ ಖಾತೆಗೆ ಹಣ ಸಂದಾಯ ಮಾಡಲಾಗುವುದು ಎಂದರು. ಮಳೆಯಲ್ಲೇ ಶಾಸಕರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಕೆ.ಧನಂಜಯ, ಟಿಎಪಿಸಿಎಂಎಸ್ ನಿರ್ದೇಶಕ ಶಿವಪ್ರಸಾದ್, ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎನ್.ಶ್ರೀನಿವಾಸ್ ಮೂರ್ತಿ, ಹುಳ್ಳೆನಹಳ್ಳಿ ಗ್ರಾಪಂ ಅಧ್ಯಕ್ಷ ದಕ್ಷಿಣ ಮೂರ್ತಿ, ಪಿಡಿಒ ಶ್ರೀನಿವಾಸ್, ತಹಸೀಲ್ದಾರ್ ಶರಥ್ ಕುಮಾರು, ಇಒ ಜಯಪಾಲು, ಸಿಡಿಪಿಒ ಸುರೇಂದ್ರ ಬಿ.ಎಲ್. ಶ್ರೀನಿವಾಸ್ ಮೂರ್ತಿ, ಪಾಪಣ್ಣ, ವಿನಯ್, ಶಶಾಂಕ್ ಇದ್ದರು.