

ಹಾಸನ: ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಆಡಳಿತ ಮಂಡಳಿಯಲ್ಲಿನ ಎರಡು ಬಣಗಳ ತಿಕ್ಕಾಟ ತಾರಕಕ್ಕೇರಿದ್ದು ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆ ರಾಜಕೀಯ ಪಕ್ಷಗಳ ಮೇಲಾಟಕ್ಕಿಂತಲೂ ಕಡಿಮೆ ಇಲ್ಲದಂತೆ ನಡೆಯಿತು.
ಅಮಾನತು ಆದೇಶ ಧಿಕ್ಕರಿಸಿ ಸಮಿತಿ ಮಾಜಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬಣದ 13 ನಿರ್ದೇಶಕರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಬಿ.ಆರ್.ಗುರುದೇವ್, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಜಿ.ಆರ್. ಶ್ರೀನಿವಾಸ್, ಖಜಾಂಚಿಯಾಗಿ ಶ್ರೀಧರ್ ಅವರನ್ನು ಘೋಷಿಸಲಾಯಿತು.
ಅದಕ್ಕೆ ಹಾಲಿ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಅವರ ಬಣದ ನಿರ್ದೇಶಕರು ಸಹಮತ ಸೂಚಿಸದೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲವೆಂದು ಷರಾ ಬರೆದು 11 ನಿರ್ದೇಶಕರ ಸಮ್ಮತಿಯೊಂದಿಗೆ ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಲಾಗಿದೆ ಎಂದು ನಿರ್ಣಯ ಅಂಗೀಕರಿಸಿದರು. ಹೀಗಾಗಿ ಸದ್ಯಕ್ಕೆ ಯಾವ ಆಡಳಿತ ಮಂಡಳಿ ಅಧಿಕೃತ ಎನ್ನುವುದನ್ನು ಸರ್ಕಾರವೇ ನಿರ್ಧರಿಸಬೇಕಾದ ಸ್ಥಿತಿ ಬಂದಿದೆ.
ಸಂಸ್ಥೆಯ ನಿಯಮ ಉಲ್ಲಂಘನೆ ಆರೋಪದಡಿ ನಿರ್ದೇಶಕ ಡಾ.ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಅವರು ಸೆ. 6 ರಂದು ಆದೇಶಿಸಿದ್ದರು. ಆಡಳಿತ ಮಂಡಳಿ ವಿವಾದ ಹಿನ್ನೆಲೆ ಸೋಮವಾರ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭಾಂಗಣಕ್ಕೆ ನಿರ್ದೇಶಕರು ಬರುತ್ತಿದ್ದಂತೆ ಅಮಾನತುಗೊಂಡಿರುವ ನಿರ್ದೇಶಕರು ಸಭೆಗೆ ಅರ್ಹರಲ್ಲವೆಂದು ಆರ್.ಟಿ.ದ್ಯಾವೇಗೌಡ ಬಣದವರು ಹೇಳಿದ್ದರಿಂದ ಅವರು ನಿರ್ಗಮಿಸಿದರು.
ಅಶೋಕ ಹಾರನಹಳ್ಳಿ ಬಣದ ಉಳಿದ ನಿರ್ದೇಶಕರು ಈ ಅಮಾನತು ಆದೇಶ ಕಾನೂನು ಬಾಹಿರವಾಗಿದ್ದು ಅದಕ್ಕೆ ನಮ್ಮ ಸಮ್ಮತಿಯಿಲ್ಲ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದಿಲ್ಲವೆಂದು ಸಭೆಯಿಂದ ನಿರ್ಗಮಿಸಿದರು. ಸಭಾಂಗಣದಿಂದ ಹೊರಬಂದ ಬಳಿಕ ಬಿ.ಆರ್.ಗುರುದೇವ್ ಹಾಗೂ ಘೋಷಿಸಲಾದ ಪದಾಧಿಕಾರಿಗಳಿಗೆ ಹಾರ ಹಾಕಿ ಶುಭಾಶಯ ಕೋರಲಾಯಿತು.
ಅಶೋಕ್ ಹಾರನಹಳ್ಳಿ ಬಣದಲ್ಲಿ ಬಿ.ಆರ್. ಗುರುದೇವ್, ಎಸ್.ಜಿ. ಶ್ರೀಧರ್, ಜಿ.ಟಿ. ಕುಮಾರ್, ಡಾ.ಅರವಿಂದ್, ಕೆ.ಎಂ. ಶಿವಣ್ಣ, ಎಂ.ಎಸ್. ಸುರೇಶ್, ಎಸ್. ಕಾರ್ತಿಕ್, ಅನೂಪ್ ಹಾರನಹಳ್ಳಿ, ಕೆ.ಪ್ರಭಾಕರ್, ಜಿ.ಆರ್.ಶ್ರೀನಿವಾಸ್, ಕೆ.ಎನ್.ಗುರಪ್ಪ ಹಾಗೂ ಅರ್ಜುನ್ ಗುರುದೇವ್ ಇದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಎಂಟಿಇಎಸ್ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಮಾತನಾಡಿ, 13 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದೆವು. ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದರಿಂದ ಅವರು ಸಭೆಯ ಅಧ್ಯಕ್ಷತೆ ವಹಿಸುವಂತಿಲ್ಲ. ಜತೆಗೆ ಅವರಿಗೆ ನಿರ್ದೇಶಕರನ್ನು ಅಮಾನತು ಮಾಡುವ ಅಧಿಕಾರವಿಲ್ಲ. ಕಾರ್ಯಕಾರಿ ಸಮಿತಿಯೇ ನಿರ್ದೇಶಕರನ್ನು ಅಮಾನತು ಮಾಡಬೇಕು. 15-20 ವರ್ಷದ ಹಳೆಯ ವಿಚಾರ ಕೆದಕಿ ಅಮಾನತು ಮಾಡುವುದು ಸಾಧ್ಯವಿಲ್ಲ. ಎಲ್ಲ ಮಾಹಿತಿಯನ್ನು ವೀಕ್ಷಕರಿಗೆ ನೀಡಿದ್ದೇವೆ ಎಂದರು.
ಬಿ.ಆರ್.ಗುರುದೇವ್ ಅವರು ಮಾತನಾಡಿ, ಎಂಟಿಇಎಸ್‌ನ ಆಡಳಿತ ಮಂಡಳಿಯಲ್ಲಿನ ಲೋಪಗಳನ್ನು ಖಂಡಿಸಿ ಅಧ್ಯಕ್ಷರ ವಿರುದ್ಧ 13 ನಿರ್ದೇಶಕರು ಆ. 23 ರಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದೆವು. ಅವಿಶ್ವಾಸದ ನಿಯಮಾನುಸಾರ 15 ದಿನಗಳ ಒಳಗೆ ಸಭೆ ಕರೆದಿದ್ದಾರೆ. ಸಭೆಗೆ ಬೇರೆ ಅಜೆಂಡಾ ಇಲ್ಲದಿರುವುದಿಂದ ಅವಿಶ್ವಾಸನ ನಿರ್ಣಯ ವಿಷಯವನ್ನಷ್ಟೇ ಆದ್ಯತೆಯಾಗಿ ಪರಿಗಣಿಸಲಾಗಿತ್ತು. 13 ನಿರ್ದೇಶಕರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದರು.
ಭಿನ್ನ ನಿರ್ದೇಶಕರ ಗೊತ್ತುವಳಿ ತಿರಸ್ಕಾರ: ಹಾಲಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಅವರು ಮಾತನಾಡಿ, ಅವಿಶ್ವಾಸ ಮಂಡಿಸಲು ಸೊಸೈಟಿಗಳ ನೋಂದಣಿ ಕಾಯ್ದೆಯಲ್ಲಿ ಅವಕಾಶ ಇಲ್ಲದ ಕಾರಣ ಭಿನ್ನ ಬಣದ ನಿರ್ದೇಶಕರ ಗೊತ್ತುವಳಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
12 ನಿರ್ದೇಶಕರು ನನಗೆ ಪತ್ರ ಬರೆದು ನೀವು ವಿಶ್ವಾಸ ಕಳೆದುಕೊಂಡಿದ್ದೀರಿ ಎಂದು ಹೇಳಿದ್ದರು. ಹದಿನೈದು ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದರೆ ಸಹಕಾರ ಸಂಘಗಳ ನಿಬಂಧಕರ ಮೂಲಕ ಸಭೆ ಕರೆಸುವುದಾಗಿ ಹೇಳಿದ್ದರು.
ಈ ನಡುವೆ ಸಮಿತಿಯ ಮೂವರು ನಿರ್ದೇಶಕರನ್ನು ಅವ್ಯವಹಾರದಲ್ಲಿ ಭಾಗಿಯಾದ ಕಾರಣಕ್ಕೆ ಅಮಾನತು ಮಾಡಿದ್ದೆವು. ಆದರೆ ಅವರನ್ನು ಸೇರಿಸಿ ಸಭೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡಲು ನಮಗೆ ಅಧಿಕಾರ ಇದೆಯೋ ಇಲ್ಲವೋ ಅನ್ನುವುದು ನ್ಯಾಯಾಲಯ ತೀರ್ಮಾನಿಸಲಿ ಎಂದರು.