ಎಂಇಎಸ್ ಧೂಳೀಪಟ, ಅರಳಿದ ಕಮಲ: ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು, ಕಾಂಗ್ರೆಸ್​ಗೆ ಭಾರಿ ಮುಖಭಂಗ

State 1
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳು ಬಿಜೆಪಿ ಕಾರ್ಯಾಲಯದಲ್ಲಿ ವಿಜಯೋತ್ಸವ ಆಚರಿಸಿದರು. ಸಚಿವ ಉಮೇಶ ಕತ್ತಿ, ಸಂಸದೆ ಮಂಗಲ ಅಂಗಡಿ, ಶಾಸಕ ಅಭಯ ಪಾಟೀಲ ಮತ್ತಿತರರು ಇದ್ದರು.
Published on

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಆಡಳಿತ ಹಾಗೂ ಪ್ರತಿಪಕ್ಷ, ಗಡಿ ಮತ್ತು ಭಾಷೆ ನಡುವಿನ ಹೋರಾಟದ ಕಣವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬಿಜೆಪಿ ಬೃಹತ್ ಗೆಲುವು ಸಾಧಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿ ಕಮಲ ಅರಳಿದೆ. ಕಾಂಗ್ರೆಸ್​ನ ‘ಕೈ’ ಮುದುಡಿದ್ದು, ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕೇವಲ 2 ವಾರ್ಡ್​ನಲ್ಲಿ ಜಯಿಸಿ ತೀವ್ರ ಮುಖಭಂಗ ಅನುಭವಿಸಿದೆ. 10 ವಾರ್ಡ್​ಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದರೆ, ಹೈದರಾಬಾದ್ ಮೂಲದ ಎಐಎಂಐಎಂ ಪಕ್ಷ ಮೊದಲ ಬಾರಿಗೆ ಪಾಲಿಕೆಯಲ್ಲಿ ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದೆ.

ಬಿಜೆಪಿಗೆ 35 ಸ್ಥಾನ: ಪಾಲಿಕೆಯ 58 ಸ್ಥಾನಗಳ ಪೈಕಿ ಬಿಜೆಪಿ 35 ಸ್ಥಾನಗಳಲ್ಲಿ ಜಯಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಕೇವಲ 10 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಈ ಕನಿಷ್ಠ ಫಲಿತಾಂಶದಿಂದಾಗಿ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಪಾಲಿಕೆ ಚುನಾವಣೆ ಉಸ್ತುವಾರಿಯಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಎಐಎಂಐಎಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 58 ವಾರ್ಡ್​ಗಳಿಗೆ ಒಟ್ಟು 385 ಮಂದಿ ಕಣದಲ್ಲಿದ್ದರು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಪಕ್ಷೇತರರೇ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿರುವುದು ಗಮನಾರ್ಹ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. 29 ವಾರ್ಡ್​ಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಗೆಲುವು ದಕ್ಕಿಲ್ಲ. ಆದರೆ, 12 ವಾರ್ಡ್​ಗಳಲ್ಲಿ ಕಾಂಗ್ರೆಸ್, ಎಂಇಎಸ್ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದಿದೆ.

ಎಂಇಎಸ್ ಮೊಂಡುತನ: ‘ಮುಖ ಕೆಳಗಾಗಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಎಂಇಎಸ್, ತನ್ನ ಮೊಂಡುತನ ಬಿಟ್ಟಿಲ್ಲ. ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಇದೀಗ ಮತ್ತೆ ಪಾಲಿಕೆ ಆವರಣದಲ್ಲಿ ಭಗವಾ ಧ್ವಜ ಹಾರಿಸುತ್ತೇವೆ ಎನ್ನುವ ಮೂಲಕ ತಮ್ಮ ಹಳೆಯ ಚಾಳಿ ಮುಂದುವರಿಸಲು ಯತ್ನಿಸುತ್ತಿದ್ದಾರೆ.

ಮುನ್ನಡೆ ಕಾಯ್ದುಕೊಂಡ ಬಿಜೆಪಿ: ಮತ ಎಣಿಕೆ ಕಾರ್ಯ ಆರಂಭದಿಂದ ಕೊನೆಯ ಸುತ್ತಿನವರೆಗೂ ಬಿಜೆಪಿಯ 30 ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರು. 22 ವಾರ್ಡ್​ಗಳಲ್ಲಿ ಬಿಜೆಪಿಗೆ ಕಾಂಗ್ರೆಸ್, ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದರು. ಮತ್ತೊಂದೆಡೆ, 24 ವಾರ್ಡ್​ಗಳ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಆಮ್ ಆದ್ಮಿ, ಪಕ್ಷೇತರರ ತೀವ್ರ ಪೈಪೋಟಿ ಕಾರಣಕ್ಕೆ ಗೆಲುವು ಕಷ್ಟವಾಯಿತು. ಎಂಇಎಸ್ ಬೆಂಬಲಿತ 22 ಅಭ್ಯರ್ಥಿಗಳು ಆರಂಭದಿಂದಲೇ ಹಿನ್ನಡೆ ಅನುಭವಿಸಿದ್ದರೂ, ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net