ಎಂಆರ್‌ಐಟಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮ ಸಮೀಪದ ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಆರ್‌ಐಟಿ) ಕಾಲೇಜಿನಲ್ಲಿ ಅ.24ರಂದು ಸಂವಹನ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಮೈಸೂರು ರಾಯಲ್ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ನಂದಿನಿ ಎನ್.ಮೂರ್ತಿ ತಿಳಿಸಿದರು.

ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಈ ಸಮ್ಮೇಳನಕ್ಕೆ ಐಇಇಇ ಬೆಂಗಳೂರು ವಿಭಾಗ (ಐಇಇಇ ಬೆಂಗಳೂರು ಸೆಕ್ಷನ್) ಮತ್ತು ಐಇಇಇ ಮೈಸೂರು ಉಪ ವಿಭಾಗ (ಐಇಇಇ ಮೈಸೂರು ಸಬ್‌ಸೆಕ್ಷನ್) ತಾಂತ್ರಿಕ ಪ್ರಾಯೋಜಕತ್ವ ಒದಗಿಸುತ್ತಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಕುಲಪತಿಗಳಾದ ಡಾ.ಎಸ್.ವಿದ್ಯಾಶಂಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಸಮ್ಮೇಳನಕ್ಕೆ ದೇಶ ವಿದೇಶಗಳ ಸಂಶೋಧಕರಿಂದ 2,500ಕ್ಕೂ ಹೆಚ್ಚು ಪ್ರಬಂಧಗಳು ಸಲ್ಲಿಕೆಯಾಗಿವೆ. ಕಠಿಣ ಮೌಲ್ಯಮಾಪನದ ನಂತರ 180 ಉತ್ತಮ ಗುಣಮಟ್ಟದ ತಾಂತ್ರಿಕ ಪ್ರಬಂಧಗಳನ್ನು ಮಂಡನೆಗೆ ಆಯ್ಕೆ ಮಾಡಲಾಗಿದೆ. ಈ ಪ್ರಬಂಧಗಳು ಐಇಇಇ ಎಕ್ಸಪ್ರೋರ್ ಡಿಜಿಟಲ್ ಲೈಬ್ರರಿ (ಐಇಇಇ ಎಕ್ಸಪ್ರೋರ್ ಡಿಜಿಟಲ್ ಲೈಬ್ರರಿ)ಯಲ್ಲಿ ಪ್ರಕಟಗೊಳ್ಳಲಿವೆ, ಇದರಿಂದ ಲೇಖಕರಿಗೆ ಹಾಗೂ ಅವರ ಸಂಸ್ಥೆಗಳಿಗೆ ಜಾಗತಿಕ ಗೋಚರತೆ ದೊರೆಯಲಿದೆ.

ಐಸಿ3 ಐಟಿ-2025 ಸಮ್ಮೇಳನವು ಶಿಕ್ಷಣ, ಸಂಶೋಧನೆ ಮತ್ತು ಉದ್ಯಮದ ನಡುವೆ ಸಹಯೋಗವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಇದು ಶಿಕ್ಷಣ ತಜ್ಞರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಂವಹನ, ಕಂಪ್ಯೂಟರ್ ಸೈನ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಇತ್ತೀಚಿನ ತಾಂತ್ರಿಕ ಪ್ರಗತಿಗಳ ಬಗ್ಗೆ ಚರ್ಚಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಮಾಲ್ಟಾದ ಇಕ್ವಿನಾಕ್ಸ್ ಅಡ್ವೈಸರಿ ಲಿಮಿಟೆಡ್ನ ಹಿರಿಯ ವ್ಯಾಪಾರ ಸಲಹೆಗಾರರು ಹಾಗೂ ಯುರೋಪ್ ಅಧ್ಯಕ್ಷರಾದ ಎಂಐಸಿಟಿ ಅಧ್ಯಕ್ಷೆ ರೋಸನ್ನಾ ಕ್ಯಾಪುಟೊ, ಮಾಲ್ಟಾದ ಇಕ್ವಿನಾಕ್ಸ್ ಗ್ರೂಪ್‌ನ ಸಿಇಒ ಹಾಗೂ ಐಆರ್‌ಐಎಸ್‌ಎಸ್ ಮಾಲ್ಟಾ ಅಧ್ಯಕ್ಷರಾದ ಬರ್ನಾರ್ಡ್ ಮಾಲಿಯಾ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಐಇಇಇ ಬೆಂಗಳೂರು ವಿಭಾಗದ ಉಪಾಧ್ಯಕ್ಷರು (ಎಂಡಿಸಿ) ಹಾಗೂ ಎನ್‌ಎಂಐಟಿ ಬೆಂಗಳೂರು ಕಾಲೇಜಿನ ಇಸಿಇ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಡಿ.ಪರಮೇಶಾಚಾರಿ,ಐಇಇಇ ಮೈಸೂರು ಉಪ ವಿಭಾಗದ ಅಧ್ಯಕ್ಷ ಹಾಗೂ ಎಂಐಟಿ ಮೈಸೂರಿನ ಡೀನ್ (ಸಂಶೋಧನೆ) ಡಾ.ರವಿಚಂದ್ರ ಕುಲಕರ್ಣಿ ಅವರು ವಿಶೇಷ ಆಹ್ವಾನಿತರಾಗಿದ್ದಾರೆ

ಮೈಸೂರು ರಾಯಲ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಚಂದನ ವಿದ್ಯಾಶಂಕರ್ ಅವರು ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಲಿದ್ದು, ಅವರೊಂದಿಗೆ ಕಾರ್ಯದರ್ಶಿ ನಂದಿನಿ ಎನ್.ಮೂರ್ತಿ, ಉಪಾಧ್ಯಕ್ಷ ಆರ್.ಎಂ.ಮಹಾಲಿಂಗೇಗೌಡ, ಖಜಾಂಚಿ ರಾಮಲಿಂಗಯ್ಯ, ಜಂಟಿ ಕಾರ್ಯದರ್ಶಿ ಬಿ.ಹೇಮಾವತಿ , ಎಂಆರ್‌ಐಟಿ ಪ್ರಾಂಶುಪಾಲ ಕೆ.ಎಸ್.ಅಭಿನಂದನ್, ಉಪ ಪ್ರಾಂಶುಪಾಲ ಎನ್.ನಕುಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಜ್ಯೋತಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net