ಎ.ಆರ್. ಕೃಷ್ಣಮೂರ್ತಿಗೆ ಸಚಿವ ಸ್ಥಾನ ನೀಡಿ

Published on

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಳೇಪೇಟೆ ಲಿಂಗರಾಜಮೂರ್ತಿ ಒತ್ತಾಯಿಸಿದ್ದಾರೆ.

ಎ.ಆರ್. ಕೃಷ್ಣಮೂರ್ತಿ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ರಾಜಕಾರಣದ ಎಲ್ಲ ಪಟ್ಟುಗಳಲ್ಲೂ ಅಪಾರ ಅನುಭವವಿದೆ. ಅವರ ತಂದೆ ಬಿ.ರಾಚಯ್ಯ ಅವರ ಮಾರ್ಗದರ್ಶನ ಹಾಗೂ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಓಡಾಡಿ ಅಪಾರ ಅನುಭವನ್ನೂ ಕೂಡ ಹೊಂದಿದ್ದಾರೆ. ಈ ಭಾಗದ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅಲ್ಲದೆ, ಈ ಬಾರಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಪ್ರತಿನಿತ್ಯ ಕ್ಷೇತ್ರದ ಪ್ರಗತಿ, ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕ್ಷೇತ್ರ ಅಭಿವೃದ್ಧಿಗೆ ನೂರಾರು ಕೋಟಿ ರೂ.ಅನುದಾನ ತಂದಿದ್ದಾರೆ. ತಮಗೆ ಮುಖ್ಯಮಂತ್ರಿ ನೀಡಿದ ವಿಶೇಷ ಅನುದಾನವನ್ನು ಎಲ್ಲ ಜಾತಿ, ಧರ್ಮಗಳ ಅಪೂರ್ಣಗೊಂಡಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸುವ ಸದುದ್ದೇಶದಿಂದ ಇದಕ್ಕೆ ಸಂಪೂರ್ಣ ಅನುದಾನವನ್ನು ನೀಡಿರುವ ರಾಜ್ಯದ ಏಕೈಕ ದೂರದೃಷ್ಟಿಯುಳ್ಳ ಶಾಸಕರಾಗಿದ್ದಾರೆ.

ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರದ ಸಂತೇಮರಹಳ್ಳಿ ಹೋಬಳಿಯನ್ನು ಒಳಗೊಂಡಿರುವ ಈ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರುವ ಶಾಸಕರಾಗಿದ್ದಾರೆ. ಆಸ್ಪತ್ರೆ, ಶಾಲೆ, ಕಾಲೇಜುಗಳು, ರಸ್ತೆ, ಚರಂಡಿ, ಪಶು ಆಸ್ಪತ್ರೆಗಳು, ಶುದ್ಧ ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಜನತೆಗೆ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಮಗೆ ಯಾವ ಖಾತೆಯನ್ನು ನೀಡಿದರೂ ಅದನ್ನು ನಿಭಾಯಿಸುವ ಶಕ್ತಿ ಇದ್ದು ಈ ಭಾಗದ ಪ್ರಭಾವಿ ನಾಯಕರಾಗಿರುವ ಇವರಿಗೆ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಉಸ್ತುವಾರಿ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net