

ಕುಮಟಾ: ತಾಲೂಕಿನ ಸಂತೇಗುಳಿ ಪಂಚಾಯಿತಿ ವ್ಯಾಪ್ತಿಯ ಉಳ್ಳೂರಮಠ ಗ್ರಾಮಕ್ಕೆ ಹೊರಗಿನ ಜನರು ಬಾರದಂತೆ ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರೇ ರಸ್ತೆ ಬಂದ್ ಮಾಡಿದ್ದಾರೆ.
ಪಂಚಾಯಿತಿ ಸದಸ್ಯ ವಿನಾಯಕ ಭಟ್ ನೇತೃತ್ವದಲ್ಲಿ ಗ್ರಾಮಸ್ಥರು ನಿರ್ಣಯ ಕೈಗೊಂಡು ಉಳ್ಳೂರುಮಠ ಕ್ರಾಸ್ನಲ್ಲಿ ರಸ್ತೆಬಂದ್ ಮಾಡಿ ಫಲಕ ಹಾಕಲಾಗಿದ್ದು ಏ.14 ರವರೆಗೆ ಅನ್ಯ ಊರಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಇದೇರೀತಿ ಮೂರೂರು ಪಂಚಾಯಿತಿ ವ್ಯಾಪ್ತಿಯಲ್ಲೂ ವಡಗೆರೆ-ಚಂದಾವರ ರಸ್ತೆಯನ್ನು ಗಿಡಗಂಟಿ, ಕಲ್ಲು ಹಾಕಿ ಬಂದ್ ಮಾಡಲಾಗಿದೆ. ಇದರಿಂದ ರಾ.ಹೆದ್ದಾರಿ 66 ರಲ್ಲಿ ಸಾಗುವವರು ಮೂರೂರು ಒಳರಸ್ತೆಯ ಮೂಲಕ ಕುಮಟಾ ಪಟ್ಟಣವನ್ನು ಪ್ರವೇಶಿಸದೆಯೇ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಸಂಚರಿಸುವುದಕ್ಕೆ ಆಯಕಟ್ಟಿನ ಜಾಗದಲ್ಲಿ ತಡೆಹಾಕಿದಂತಾಗಿದೆ. ಕರೊನಾ ಸೋಂಕಿನ ಮುಂಜಾಗ್ರತೆಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಗತ್ಯ ಓಡಾಡುವವರ ಮೇಲೆ ತೀವ್ರ ನಿಗಾ ಇರುವದರಿಂದ ಪೊಲೀಸರ ಕಣ್ತಪ್ಪಿಸಿ ಮೂರೂರು ಒಳ ರಸ್ತೆಯಲ್ಲಿ ಓಡಾಟ ಹೆಚ್ಚಾಗಿದ್ದರಿಂದ ಸಾರ್ವಜನಿಕರೇ ಇದಕ್ಕೆ ಕಡಿವಾಣ ಹಾಕಿದ್ದಾರೆ.