

ತಿ.ನರಸೀಪುರ: ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಉಪ್ಪಾರ ಸಮುದಾಯ ರಾಜಕೀಯವಾಗಿ ಮುನ್ನೆಲೆಗೆ ಬರಲು ಸಂಘಟಿತರಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೊಡ್ಡೆಬಾಗಿಲುಮೋಳೆ ಎಂ.ಸೋಮಣ್ಣ ಸಲಹೆ ನೀಡಿದರು.
ತಾಲೂಕಿನ ಕೇತಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಉಪ್ಪಾರ ಸಮಾಜದ ಜನಸಂಖ್ಯಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಂಘಟಿತರಾಗಿ ರಾಜಕೀಯ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಉಪ್ಪಾರ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದ್ದು, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಜ.20 ರೊಳಗೆ ಮಾವಿನಹಳ್ಳಿ ಗ್ರಾಮದ ಎಂ.ಸಿ.ರಾಜಣ್ಣ ಹಾಗೂ ಸಿದ್ದಶೆಟ್ಟಿ ಕೇತಳ್ಳಿ ಅವರನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬೇಕೆಂದು ಎಂ.ಸೋಮಣ್ಣ ತಿಳಿಸಿದರು.
ಸಮಾಜದ ಹಿರಿಯ ಕೇತಳ್ಳಿ ಸಿದ್ದಶೆಟ್ಟಿ, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರಾದ ಗುರುಮೂರ್ತಿ, ನಂಜುಂಡ ಕಾವೇರಿಪುರ, ಎಂ.ಸಿ.ರಾಜಣ್ಣ ಮಾವಿನಹಳ್ಳಿ, ಮಣಿಕಂಠ, ನಟರಾಜು ಕನ್ನಳ್ಳಿಮೋಳೆ, ಪುಟ್ಟಮಾದಶೆಟ್ಟಿ ತೊಟ್ಟವಾಡಿ, ಹರೀಶ ಹೊಸಳ್ಳಿಮೋಳೆ, ನಾಗರಾಜು ಕೊತ್ತೇಗಾಲ, ಮಹೇಶ ಕೆರಟ್ಟಿ, ಕೇತಳ್ಳಿ ಗ್ರಾಮದ ಯಜಮಾನರಾದ ಮಹೇಶ್, ಸೋಮಣ್ಣ, ಕುಮಾರ, ಮಹದೇವ, ಜಯಣ್ಣ, ಕೆಂಪಶೆಟ್ಟಿ, ಮಂಜು ಪ್ರಶಾಂತ್ ಮತ್ತಿತರರಿದ್ದರು.