

ಚಿಕ್ಕಬಳ್ಳಾಪುರ : ನ್ಯಾಯಾಲಯದ ಆದೇಶದ ನಡುವೆಯೂ ಭೂಸ್ವಾಧೀನಕ್ಕೆ ಪರಿಹಾರ ಒದಗಿಸದ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನು ಕೋರ್ಟ್ ಸಿಬ್ಬಂದಿ ನೇತೃತ್ವದಲ್ಲಿ ಜಪ್ತಿಗೊಳಿಸಿದ ಘಟನೆಗೆ ಚಿಕ್ಕಬಳ್ಳಾಪುರ ಸಾಕ್ಷಿಯಾಯಿತು.
ಬುಧವಾರ ಬೆಳಗ್ಗೆ ಕಚೇರಿಯಲ್ಲಿನ ಪೀಠೋಪಕರಣಗಳು, ಕುರ್ಚಿಗಳು ಸೇರಿ ಹಲವು ವಸ್ತುಗಳನ್ನು ಹೊರಗೆ ತಂದು ಆವರಣದಲ್ಲಿಡುತ್ತಿದ್ದಂತೆ ಜನರು ಕುತೂಹಲದಿಂದ ನೋಡುತ್ತಿದ್ದರು. ಮೊದಲು ಕಚೇರಿ ನವೀಕರಣ ಇಲ್ಲವೇ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದೇ ಭಾವಿಸಿದ್ದರು. ಕೊನೆಗೆ ಜಪ್ತಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವಕೀಲರು, ತಾಲೂಕು ಕಚೇರಿ ಮತ್ತು ನೋಂದಣಿ ಕಚೇರಿ ಸಿಬ್ಬಂದಿ, ಸಾರ್ವಜನಿಕರು ಸ್ಥಳಕ್ಕೆ ಬಂದು ಜೋರಾಗಿಯೇ ಚರ್ಚಿಸುತ್ತಿದ್ದ ದೃಶ್ಯ ಕಂಡು ಬಂತು.
ಅಸಲಿಗೆ ನಡೆದಿದ್ದೇನು?
ಬಾಗೇಪಲ್ಲಿಯ ಡಿವಿಜಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿಗಳೂ ಆಗಿರುವ ಉಪವಿಭಾಗಾಧಿಕಾರಿ ಭೂಸ್ವಾಧೀನಕ್ಕೆ ಆದೇಶ ಹೊರಡಿಸಿದ್ದರು. ನಿಗದಿಪಡಿಸಿದ ಜಾಗವನ್ನು ಪಿಡಬ್ಲುೃಡಿ ವಶಪಡಿಸಿಕೊಂಡಿದ್ದು, ಈ ವೇಳೆ ಅಡ್ಡಬಂದಿದ್ದ ಕಟ್ಟಡವನ್ನು ತೆರವುಗೊಳಿಸಿತ್ತು. ಆದರೆ, ನಿಯಮಾನುಸಾರ ಸಂಬಂಧಪಟ್ಟ ಜಾಗದ ಮಾಲೀಕರಿಗೆ ಪರಿಹಾರ ನೀಡಿಲ್ಲ. ಇದರಿಂದ ಸಂತ್ರಸ್ತರು ನ್ಯಾಯಯುತ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಸುಧೀರ್ಘ ವಿಚಾರಣೆ ನಡೆದು, ಪರಿಹಾರ ಒದಗಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಆದರೆ, ಆದೇಶಕ್ಕೆ ಬೆಲೆ ನೀಡದ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನು ಕೋರ್ಟ್ ವತಿಯಿಂದ ಜಪ್ತಿ ಮಾಡಲಾಯಿತು. ಅಧಿಕಾರಿಗಳ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಭೂಸ್ವಾಧೀನ ಪ್ರಕ್ರಿಯೆ
ಬಾಗೇಪಲ್ಲಿಯ ಡಿವಿಜಿ ರಸ್ತೆ ವಿಸ್ತರಣೆಗೆ 2006ರಲ್ಲಿ ಅಧಿಸೂಚನೆ ಹೊರಡಿಸಿದ್ದು, ಜಿಲ್ಲಾಡಳಿತವು ಒಂದು ಅಡಿಗೆ 240 ರೂ. ನಿಗದಿಪಡಿಸಿತ್ತು. ಅದರಂತೆ 2011ರಲ್ಲಿ ತೆರವು ಪ್ರಕ್ರಿಯೆ ಕೈಗೊಂಡಿತ್ತು. ಇದರ ನಡುವೆ ಅಲ್ಪಪರಿಹಾರ ಸಾಲದು ಎಂದು ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದಾಗ ಒಂದು ಅಡಿಗೆ ತಲಾ 890 ರೂ. ಪರಿಹಾರ ನೀಡಲು ಚಿಕ್ಕಬಳ್ಳಾಪುರದ ಸೀನಿಯರ್ ಜೆಎಂಎ್ಸಿ ನ್ಯಾಯಾಧೀಶರು ಎರಡು ತಿಂಗಳ ಹಿಂದೆ ಆದೇಶಿಸಿದ್ದರು.
ಸಮಯಾವಕಾಶ ಕೇಳಿದ ಅಧಿಕಾರಿಗಳು
ಉಪ ವಿಭಾಗಾಧಿಕಾರಿಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದ ವಸ್ತುಗಳನ್ನು ಹಿಂತಿರುಗಿಸಲಾಯಿತು. ಈ ಹಿಂದೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಹಿಡಿದುಕೊಂಡು ಬಂದು ಗಮನ ಸೆಳೆದಾಗ ಸಂಬಂಧಪಟ್ಟ ಅಧಿಕಾರಿಗಳು ಅಸಡ್ಡೆ ತೋರಿದ್ದರು. ಜಪ್ತಿ ಬಿಸಿ ತಟ್ಟುತ್ತಿದ್ದಂತೆ ನಿಯಮಾನುಸಾರ ಪರಿಹಾರ ಒದಗಿಸುವುದಾಗಿ ದೂರುದಾರರಲ್ಲಿ ಮನವಿ ಮಾಡಿದರು.
ಎಸಿ ಎದುರೇ ಕುರ್ಚಿ ಎತ್ತಂಗಡಿ
ಬೆಳಗ್ಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕುಳಿತು ಕೆಲಸದಲ್ಲಿ ತೊಡಗಿದ್ದರು. ಇದೇ ವೇಳೆ ಬಂದು ಅವರ ಕುರ್ಚಿ, ಟೇಬಲ್‌ಗಳನ್ನು ತೆಗೆದುಕೊಂಡು ಹೋಗಲಾಯಿತು. ಇದನ್ನು ನೋಡುತ್ತಲೇ ನಿಂತಿದ್ದ ಅಧಿಕಾರಿ ಕೊನೆಗೆ ಮುಜುಗರಗೊಂಡು ಬೇರೆ ಇಲಾಖೆಯ ಕೊಠಡಿಗೆ ತೆರಳಿದರು.