ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ

Child Rape New
Published on

ರಾಣೆಬೆನ್ನೂರ: ಬಿಎಸ್​ಸಿ(ಕೃಷಿ) ಅಧ್ಯಯನ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆಯಲ್ಲಿ ಫೇಲ್ ಮಾಡುವ ಬೆದರಿಕೆಯೊಡ್ಡಿ, ಉಪನ್ಯಾಸಕನೊಬ್ಬ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಘಟನೆ ತಾಲೂಕಿನ ಹನುಮನಮಟ್ಟಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನೂರನವಾಜ್ ಎ.ಎಸ್. ಅತ್ಯಾಚಾರವೆಸಗಿದ ಆರೋಪಿ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ವಿದ್ಯಾರ್ಥಿನಿ ತಾಲೂಕಿನ ಹನುಮನಮಟ್ಟಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್​ಸಿ ಮೂರನೇ ಸೆಮಿಸ್ಟರ್​ನಲ್ಲಿ ಅಧ್ಯಯನ ಮಾಡುತ್ತಿದ್ದಳು.

2019 ಮಾರ್ಚ್ ತಿಂಗಳಲ್ಲಿ ಉಪನ್ಯಾಸಕ ನೂರನವಾಜ್, ‘ನೀವು ಅಂದರೆ ನನಗೆ ಇಷ್ಟ. ನನ್ನೊಂದಿಗೆ ಸಹಕರಿಸಿ, ಪರೀಕ್ಷೆಯಲ್ಲಿ ಉತ್ತಮ ಅಂಕ ನೀಡಿ ಪಾಸು ಮಾಡುತ್ತೇನೆ. ಸಹಕರಿಸದಿದ್ದರೆ ಫೇಲ್ ಮಾಡುತ್ತೇನೆ ಎಂದು ಹೇಳಿ ತನ್ನ ಕಚೇರಿಯಲ್ಲೇ ಲೈಂಗಿಕ ಅತ್ಯಾಚಾರವೆಸಗಿದ್ದಾನೆ. ನಂತರ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗಿ ಕಾಲೇಜ್​ಗೆ ರಜೆ ನೀಡಲಾಗಿತ್ತು. ಆದರೆ, ನೂರನವಾಜ್ ನನ್ನನ್ನು ಮನೆಗೆ ಕಳುಹಿಸದೆ, ಹಾವೇರಿಯ ಮನೆಯೊಂದರಲ್ಲಿ ಇಟ್ಟು ನಿರಂತರವಾಗಿ ಅತ್ಯಾಚಾರ ಮಾಡುತ್ತ ಬಂದಿದ್ದಾನೆ. ಇದನ್ನು ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ. ಇಲ್ಲವಾದರೆ ನಿನ್ನ ಜೀವ ತೆಗೆಯುತ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ನೊಂದ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.

ಪ್ರಕರಣ ಕುರಿತು ಉಪನ್ಯಾಸಕನ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಜಾತಿ ನಿಂದನೆ ದೂರನ್ನು ವಿದ್ಯಾರ್ಥಿನಿ ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ನೂರನವಾಜ್​ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಬಾಕ್ಸ್...

ಉಪನ್ಯಾಸಕನ ಪತ್ನಿಯಿಂದ ಹಲ್ಲೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ವಿಚಾರ ತಿಳಿದ ಉಪನ್ಯಾಸಕನ ಪತ್ನಿ ಹಾಗೂ ಆಕೆಯ ಇನ್ನಿಬ್ಬರು ಸಂಬಂಧಿಕರು ಸೇರಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯಿರುವ ಸ್ಥಳಕ್ಕೆ ಹೋಗಿ ಮನಬಂದಂತೆ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಯು ನೂರನವಾಜ್ ಹಾಗೂ ಆತನ ಪತ್ನಿ ಹಾಗೂ ಇಬ್ಬರು ಸಂಬಂಧಿಕರ ಮೇಲೂ ದೂರ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ನೂರನವಾಜ್ ಸೇರಿ ನಾಲ್ವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net