ಉಪಚುನಾವಣೆಗೆ ಯೋಗೇಶ್ವರ್ ಸಮರ್ಥ ಅಭ್ಯರ್ಥಿ

CBP
Published on

ಚನ್ನಪಟ್ಟಣ: ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ಸಮರ್ಥರಾಗಿದ್ದು, ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂದು ಜಿಪಂ ಮಾಜಿ ಸದಸ್ಯ ಸದಾನಂದ ಆಗ್ರಹಿಸಿದರು.

ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್ನಲ್ಲಿ ಗುರುವಾರ ತಾಲೂಕು ಜಿಜೆಪಿ ಎಸ್ಸಿ, ಎಸ್ಟಿ ಮೋರ್ಚಾದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಯೋಗೇಶ್ವರ್ ಅವರ ಪಾತ್ರ ಅಪಾರವಾಗಿದ್ದು, ದಲಿತ ಸಮುದಾಯ ಸೇರಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಯೋಗೇಶ್ವರ್ ಅವರಿಗೆ ಎನ್‌ಡಿಎ ಟಿಕೆಟ್ ನೀಡಬೇಕು ಎಂಬುದು ಪಕ್ಷಾತೀತವಾದ ಅಭಿಪ್ರಾಯವಾಗಿದೆ ಎಂದರು.

ಅಧಿಕಾರದಲ್ಲಿರುವ ಕಾಂಗ್ರೆಸ್ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಅವರನ್ನು ಎದುರಿಸಲು ಯೋಗೇಶ್ವರ್ ಅವರೇ ಸೂಕ್ತ. ಈ ವಿಚಾರ ಸ್ವತಃ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕೇಂದ್ರದ ಎನ್‌ಡಿಎ ವರಿಷ್ಠರಿಗೂ ಗೊತ್ತಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಸುತ್ತಾರೆ ಎಂಬ ವಿಶ್ವಾಸವಿದೆ. ಈ ವಿಚಾರದಲ್ಲಿ ಸಿಪಿವೈ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

ಬಿಜೆಪಿ ಎಸ್ಸಿ ಘಟಕದ ಗ್ರಾಮಾಂತರ ಮೋರ್ಚಾ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷಕ್ಕೆ ನೆಲೆಯೇ ಇಲ್ಲದ ವೇಳೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಯೋಗೇಶ್ವರ್ ಗೆಲುವು ಸಾಧಿಸಿದ್ದರು. ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ್ದಾರೆ. ಚುನಾವಣೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಶೀಘ್ರ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಚಕ್ಕಲೂರು ಚೌಡಯ್ಯ, ನೀಲಸಂದ್ರ ಸಿದ್ದರಾಮು, ಪಾರ್ಥ, ಸಂತೋಷ್, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net