ಉಪ ಪ್ರತ್ಯೇಕ ರಾಜ್ಯದ ಕೂಗಿಗೆ ಶಾಸಕ ಸವದಿ ಬೆಂಬಲ

siddu savdi
ಶಾಸಕ ಸಿದ್ದು ಸವದಿ
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರು ಮೂರು ದಿನಗಳಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳಿಂದ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ಪಕ್ಷಾತೀತವಾಗಿಯೂ ಅನೇಕ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸಹ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟದ ಕಿಚ್ಚು ತೀವ್ರಗೊಳ್ಳುವಂತೆ ಮಾಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಸಹ ಹೋರಾಟದ ವೇದಿಕೆಯಿಂದ ಮೊಳಗಲು ಆರಂಭಿಸಿದೆ.

ಪ್ರತ್ಯೇಕ ರಾಜ್ಯದ ಕೂಗಿಗೆ ಇದೀಗ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಧ್ವನಿಗೂಡಿಸಿದ್ದು, ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಹಾದ್ರೋಹವನ್ನು ಸಹಿಸಲು ಆಗದು. ಒಂದು ನೀರಾವರಿ ಯೋಜನೆ ಪೂರ್ಣಗೊಳಿಸಲು ಆರು ದಶಕವಾದರೂ ಆಗಿಲ್ಲ ಎಂದರೆ ಇದಕ್ಕಿಂತ ನಮ್ಮ ದುರ್ದೈವ ಯಾವುದಿದೆ. ಹೀಗಾಗಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ಗುರುವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಘೋಷಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ವೇದಿಕೆ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಆಹೋ ರಾತ್ರಿ ಧರಣಿ ಸತ್ಯಾಗ್ರಹದ ಭಾಗವಾಗಿ ಗುರುವಾರ ಬಾಗಲಕೋಟೆಯಲ್ಲಿ ಇರುವ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯುವ ಹೋರಾಟ ನಿಗದಿಯಾಗಿತ್ತು. ಹೋರಾಟದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಭಾಗವಹಿಸಿದ್ದರು. ಈ ವೇಳೆ ವ್ಯಾಪಕ ಪೊಲೀಸ್ ಬಂದೋ ಬಸ್ತ್ ಮಾಡಿ, ಕಚೇರಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಏರ್ಪಡಿಸಿದ್ದರಿಂದ ಕಚೇರಿಗೆ ಬೀಗ ಹಾಕಲು ಆಗಲಿಲ್ಲ.

ಈ ವೇಳೆ ಮಾತನಾಡಿದ ಸಂತ್ರಸ್ತರನ್ನು ಉದ್ದೇಶಿಸಿ ಹಾಗೂ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿದ್ದು ಸವದಿ, ಇಂದು ನೀರಾವರಿ ಯೋಜನೆಗಾಗಿ ೬೦ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಎಂದರೆ ಮೊದಲು ಈ ಭಾಗದ ನಾವುಗಳು ಹೇಡಿಗಳು ಎಂದರ್ಥ. ಸರ್ಕಾರ ಯಾವಾಗಲೂ ಗಂಡಸರ ಮಾತಿಗೆ ಬಗ್ಗುತ್ತದೆ. ನಮಗೆ ಸರ್ಕಾರ ಬಗ್ಗಿಸುವ ಶಕ್ತಿ ಇಲ್ಲವಾಗಿದೆ. ಇಲ್ಲಿ ನಮ್ಮ ಕಾಲನ್ನು ನಾವೇ ಜಗ್ಗಿಕೊಳ್ಳುತ್ತೇವೆ. ಇದರಿಂದ ಉತ್ತರ ಕರ್ನಾಟಕಕ್ಕೆ ಹಿನ್ನೆಡೆ ಆಗಿದೆ ಎಂದು ವಿಶ್ಲೇಷಿಸಿದರು.

ಇಲ್ಲಿ ಜನಪ್ರತಿನಿಧಿಗಳು ನಮ್ಮ ಪಕ್ಷ, ನಿಮ್ಮ ಪಕ್ಷ ಎನ್ನುವುದನ್ನು ಬಿಟ್ಟು ಬರುವ ಚಳಿಗಾಲ ಅಽವೇಶನದಲ್ಲಿ ಈ ಭಾಗದ ಎಲ್ಲ ಶಾಸಕರು ಸದನದ ಭಾವಿಗೆ ಇಳಿದು ಹೋರಾಟ ಮಾಡಬೇಕು. ಕೃಷ್ಣಾ ಯೋಜನೆಗೆ ನ್ಯಾಯ ಸಿಗದೇ ಇದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯ. ಬೆಳಗಾವಿಯಲ್ಲಿ ಶಾಸಕರು ಸಭೆ ಕರೆಯಲಿ, ನಾವು ಅದರಲ್ಲಿ ಭಾಗವಹಿಸುತ್ತೇವೆ. ಸದನದ ಮೊದಲ ದಿನವೇ ಕೃಷ್ಣಾ ಯೋಜನೆಗೆ ಆಗ್ರಹಿಸಿ ಹೋರಾಟ ಮಾಡುವಂತೆ ಪತ್ರ ಕೊಡಲಿ. ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತೇನೆ. ಉಳಿದ ಈ ಭಾಗದ ಶಾಸಕರು ಇದಕ್ಕೆ ಬೆಂಬಲವಾಗಿ ನಿಲ್ಲಲಿ. ಹಾಗೆಯೇ ಪಕ್ಷ ಮರೆತು ಸಚಿವರು ಸಹ ಸದನದ ಭಾವಿಗೆ ಇಳಿಯಲಿ, ಇಲ್ಲವೇ ಸರ್ಕಾರದಿಂದ ಉತ್ತರ ಕೊಡೆಸುವ ಕೆಲಸ ಮಾಡಲಿ ಎಂದರು.

ಕಾವೇರಿ ವಿಚಾರವಾಗಿ ಮೈಸೂರ ಭಾಗದಲ್ಲಿ ನಡೆಯುವ ಹೋರಾಟದ ಒಗ್ಗಟ್ಟು ನಮ್ಮಲ್ಲಿ ಬರುತ್ತಿಲ್ಲ. ನಮ್ಮಲ್ಲಿ ಅಽಕಾರದ ದುರಾಸೆಗಾಗಿ ಒಬ್ಬರ ಕಾಲು ಮತ್ತೊಬ್ಬರು ಜಗ್ಗುವುದು ನಡೆದಿದೆ. ಖುರ್ಚಿ ಶಾಶ್ವತವಾ? ಹಿಂದೆ ಯಾರೋ ಇದ್ದರು, ಇಂದು ನಾವಿದ್ದೇವೆ, ನಾಳೆ ಈ ಸ್ಥಾನಕ್ಕೆ ಮತ್ತ್ಯಾರೋ ಬರುತ್ತಾರೆ. ಅಽವೇಶನದ ವೇಳೆ ನನ್ನ ಶಕ್ತಿ ಮೀರಿ ಹೋರಾಟ ಮಾಡುವೆ ಎಂದು ವಾಲ್ದಾನ ಮಾಡಿದ ಅವರು, ಈಗಾಗಲೇ ಇಲ್ಲಿನ ವಕೀಲರು ಹೇಳಿದಂತೆ ಎಲ್ಲ ಪಕ್ಷಗಳ ಸರ್ಕಾರಗಳು ನಮಗೆ ನಿರಂತರ ಅನ್ಯಾಯ ಮಾಡುತ್ತ ಬಂದಿವೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗ ಹೋರಾಟ ತೀವ್ರಗೊಂಡಿದೆ. ಇದಕ್ಕೆ ಸ್ಪಂದಿಸಿ ಬೆಳಗಾವಿಯಲ್ಲಿ ಈ ಭಾಗದ ಶಾಸಕರು ಎಷ್ಟು ಜನ ಬರುತ್ತಾರೆ ಎನ್ನುವುದು ಅಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net