

ಸಂತೋಷ ದೇಶಪಾಂಡೆ
ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ: ನಿತ್ಯವು ಪ್ರಕೃತಿಯೊಂದಿಗೆ ಬದುಕುವ ಅನ್ನದಾತರು ನಾಡಿನ ಜನರ ಅನ್ನದ ಬಟ್ಟಿಲು ತುಂಬಿಸಲು ಹವಣಿಸುತ್ತಾರೆ. ಅವರ ಕಷ್ಟ, ನೋವು, ಸವಾಲುಗಳನ್ನು ಇತ್ಯರ್ಥ ಪಡಿಸಲು ನನ್ನ ಜೀವನ ಮೀಸಲಿಡುತ್ತೇನೆ. ಸಂಶೋಧನೆ, ಆವಿಷ್ಕಾರಗಳು ಅವರ ಸಹಕಾರಿಯಾಗಲಿ ಎನ್ನುವುದೇ ನಮ್ಮ ಆಶಯ…!!
ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌ಡಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿಮಾನದ ಮಾತುಗಳಿವು. ರೈತರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಮೂಲಕ ದೇಶ ಸೇವೆ ಮಾಡಬೇಕು. ರೈತರು ಉಳಿದರೇ ಆಹಾರ ಉತ್ಪಾದನೆ ಸಾಧ್ಯ. ಕೇವಲ ತಂತ್ರಜ್ಞಾನದಿಂದ ಬದುಕಲು ಸಾಧ್ಯವಿಲ್ಲ ಅಂತ ಸ್ಮರಿಸಿದರು.
ಪಿಎಚ್‌ಡಿಯಲ್ಲಿ ಅಂಜಲಿ ವಿ.ಎ. ೪ ಚಿನ್ನ:
ಕೇರಳ ಮೂಲದ ಅಂಜಲಿ ವಿ.ಎ. ಪಿಎಚ್‌ಡಿ ವಿಭಾಗದಲ್ಲಿ ೪ ಚಿನ್ನ ಪಡೆದುಕೊಂಡು ವಿಶೇಷ ಸಾಧನೆ ಮಾಡಿದ್ದಾರೆ. ತಂದೆ ಅಶ್ವಿನಿಕುಮಾರ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ತಾಯಿ ಜಯಶ್ರೀ ಗೃಹಿಣಿ. ಕೇರಳ ಕೃಷಿ ವಿದ್ಯಾಲಯ ಅಡಿಯಲ್ಲಿ ಎಂ.ಎಸ್ಸಿ ಅಗ್ರಿ ಸಸ್ಯರೋಗ ಶಾಸöದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಿಸ್ .ಮೇಮಿ ಜೋಸ್ ಮೆಮೊರಿಯಲ್ ಮೇರಿಟ್ ಪ್ರಶಸ್ತಿ ಪಡೆದು ಕೇರಳ ರಾಜ್ಯದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ದೇಶದ ರೈತರಿಗೆ ನನ್ನಿಂದ ಏನಾದರು ವಿಶೇಷ ಕೊಡುಗೆ ನೀಡಬೇಕು. ನಾನು ಕೈಗೊಂಡಿರುವ ಸಂಶೋಧನೆಗಳು ಅವರ ಬದುಕು ನೆಮ್ಮದಿಯಿಂದ ಇಡಬೇಕು ಎನ್ನುವುದು ನನ್ನ ಆಶಯ. ನಮ್ಮ ಕರ್ತವ್ಯ, ಜವಾಬ್ದಾರಿ ದೇಶಕ್ಕಾಗಿ ಇರಲಿದೆ ಎಂದು ಅಂಜಲಿ ವಿಜಯವಾಣಿ ಜೊತೆ ಹಂಚಿಕೊಂಡರು.
ಎಂಎಸ್‌ಸಿ ವಿಭಾಗದಲ್ಲಿ ಇಬ್ಬರಿಗೆ ೪ ಚಿನ್ನ…:
ಸ್ನಾತಕೋತ್ತರ ವಿಭಾಗದಲ್ಲಿ ತಾನ್ಯಾ ಎಂ. ಗೌಡ ಹಾಗೂ ಸೋನಿಕಾ ಎ.ಎಸ್. ತಲಾ ನಾಲ್ಕು ಚಿನ್ನದ ಪದಕ ಪಡೆದು ಚಿನ್ನದ ಬೇಡಗಿಯರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ನಿವಾಸಿಯಾಗಿರುವ ತಾನ್ಯಾ ಎಂ. ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ತಂದೆ ಮೋಹನ ಗೌಡ ಎಚ್.ಆರ್. ನಿವೃತ್ತ ಶಿಕ್ಷಕ. ತಾಯಿ ಅಂಬಿಕಾ ಗೌಡ ಗೃಹಿಣಿ. ೨೦೨೧ ರಲ್ಲಿ ಶಿವಮೊಗ್ಗದ ವಿವಿಯಲ್ಲಿ ಪದವಿ ವಿಭಾಗದಲ್ಲಿ ಅತೀ ಹೆಚ್ಚು ಚಿನ್ನದ ಪದಕ ಪಡೆದುಕೊಂಡಿದ್ದರು. ಪಿಜಿ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದರು. ಪುಸ್ತಕ ಓದುವುದು, ಆಟದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿಶೇಷ ಒತ್ತು ನೀಡಿದ್ದು, ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗುವ ಮೂಲಕ ಆಡಳಿತದ ಮೂಲಕ ಕೃಷಿಕರಿಗೆ ನೆರವು ನೀಡಬೇಕು. ಸರ್ಕಾರದ ಮಟ್ಟದಲ್ಲಿ ಮಹತ್ವ ಬದಲಾವಣೆ, ಕೃಷಿ ಕ್ಷೇತ್ರದಲ್ಲಿ ನೀತಿ, ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎನ್ನುವುದು ಗುರಿ ಹೊಂದಿದ್ದಾರೆ. ಈಗಾಗಲೇ ಸಿದ್ಧತೆ ಆರಂಭಿಸಿರುವ ತಾನ್ಯ ಆಡಳಿತದ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಬೇಕು ಅಂತ ಮಹದಾಸೆ ಇಟ್ಟುಕೊಂಡಿದ್ದಾರೆ.
ಇನ್ನೂ ಸೋನಿಕಾ ಎ.ಎಸ್. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಡೇಮರ್ಲಹಳ್ಳಿ ನಿವಾಸಿಯಾಗಿದ್ದು, ಪುಸ್ತಕ ಓದುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ತಂದೆ ಶಿವಣ್ಣ ಕೃಷಿಕ, ತಾಯಿ ವೆಂಕಟಲಕ್ಷ್ಮಮ್ಮ ಗೃಹಿಣಿ. ನಾಲ್ಕು ಪದಕ ಪಡೆದು ವಿವಿಯಲ್ಲಿ ಸಾಧನೆ ಮಾಡಿದ್ದು, ತಂದೆ ಕೃಷಿಕರಾಗಿದ್ದು, ಅನ್ನದಾತರ ಸಮಸ್ಯೆ ಕಣ್ಣಾರೇ ಕಂಡಿದ್ದಾರೆ. ಹೀಗಾಗಿ ಕೃಷಿಯಲ್ಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು. ನೀರಾವಳಿ, ಒಣ ಬೇಸಾಯಿ ಪದ್ಧತಿಯಲ್ಲಿ ನವೀನ ಮಾದರಿಯ ಕೃಷಿ ಪದ್ಧತಿ ಬರಬೇಕು. ಹಳೇ ಬೇರು, ಹೊಸ ಚಿಗುರು ಇರಬೇಕು ಎನ್ನುವುದು ಅವರ ಮನದ ಮಾತು.