

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ನಡೆಸಿದ ಪಿಡಿಒ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಅಧಿಕಾರಿಗಳ ತಪ್ಪಿನಿಂದ ಕೆಲ ಗೊಂದಲ ಸೃಷ್ಟಿಯಾಗಿದ್ದರೂ ಅಮಾಯಕ ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಖಂಡನೀಯ. ತಕ್ಷಣ ರದ್ದುಪಡಿಸಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಆಗ್ರಹಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಮರು ಪರೀಕ್ಷೆ ನಡೆಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ ಅವರು, ಕಲ್ಯಾಣ ಕರ್ನಾಟಕ ವೃಂದದ ಪಿಡಿಒ ೯೭ ಹುದ್ದೆ ನೇಮಕಾತಿಗೆ ನ.೧೭ರಂದು ಪರೀಕ್ಷೆ ನಡೆದಿದೆ. ರಾಯಚೂರು ಜಿಲ್ಲೆ ಸಿಂಧನೂರ ಸರ್ಕಾರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗೊಂದಲವಾಗಿದ್ದು, ಯಾದಗಿರಿ ಜಿಲ್ಲೆಯ ೧೨ ಅಭ್ಯರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಇಷ್ಟೆಲ್ಲ ಆದರೂ ಸಿಎಂ ಸಿದ್ದರಾಮಯ್ಯ ಏನೂ ನಡೆದಿಲ್ಲದಂತೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ, ಅಪ್ರಚಾರ ಮತ್ತು ಪ್ರತಿಭಟನೆ ಪ್ರಚೋದನೆ ಹಿನ್ನೆಲೆಯಲ್ಲಿ ೧೨ ಜನರ ವಿರುದ್ಧ ದೂರು ದಾಖಲಿಸಿದ್ದನ್ನು ಸಮರ್ಥಿಸಿಕೊಂಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಸಿಂಧನೂರಿನ ಪರೀಕ್ಷಾ ಕೇಂದ್ರದಲ್ಲಿ ತಮ್ಮಿಂದಾದ ಪ್ರಮಾದ ಮರೆಮಾಚಲು ಅಧಿಕಾರಿಗಳು ವಾಸ್ತವ ತಿಳಿಸದೆ ಸೋರಿಕೆ, ಗೊಂದಲ ಆಗಿಲ್ಲ. ೧೨ ಜನರಿಂದಲೇ ಅಂತಹ ವಾತಾವರಣ ಸೃಷ್ಟಿಯಾಗಿದ್ದು ಎಂದು ಸಿಎಂ ಸದನದಲ್ಲಿ ಸುಳ್ಳು ಹೇಳಿದ್ದಾರೆ. ನಿಯಮದಂತೆ ಪ್ರಶ್ನೆಪತ್ರಿಕೆ ಬಂಡಲ್ ವಿದ್ಯಾರ್ಥಿಗಳ ಎದುರು ಓಪನ್ ಮಾಡಬೇಕು. ಆದರೆ ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನವೇ ಬಂಡಲ್ ಸೀಲ್ ಒಡೆದಿದ್ದರಿಂದ ಅಭ್ಯರ್ಥಿಗಳು ಕೆರಳಿದ್ದಾರೆ ಎಂದರು.
೮೪೦ ಅಭ್ಯರ್ಥಿಗಳ ಪೈಕಿ ಬಹುತೇಕರು ಪರೀಕ್ಷೆ ಬರೆಯದೆ ಹೊರಬಂದಿದ್ದಾರೆ. ಪ್ರಶ್ನೆಪತ್ರಿಕೆ ತಡವಾಗಿ ಬಂದಿದ್ದಲ್ಲದೆ ಬಂಡಲ್ ಮೊದಲೇ ತೆರೆದಿರುವುದನ್ನು ಅಭ್ಯರ್ಥಿಗಳು ಪ್ರಶ್ನಿಸಿದಾಗ ಹೆಚ್ಚಿನ ಸಮಯಾಕಾವಕಾಶ ನೀಡುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. ಕೆಪಿಎಸ್‌ಸಿ ನಿಯಮದ ವಿರುದ್ಧ ಹೆಚ್ಚುವರಿ ಸಮಯ ನೀಡಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ಈ ಘಟನೆ ಕೇವಲ ಸಿಂಧನೂರಿಗೆ ಸೀಮಿತವಾಗಿಲ್ಲ. ಕಲಬುರಗಿಯಲ್ಲೂ ೨೫-೩೦ ನಿಮಿಷ ವಿಳಂಬವಾಗಿ ಪ್ರಶ್ನೆಪತ್ರಿಕೆ ನೀಡಲಾಗಿದೆ. ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಅಭ್ಯರ್ಥಿಗಳನ್ನು ಬಲಿಪಶು ಮಾಡಿದ್ದಾರೆ ಎಂದು ದೂರಿದರು.