

ಚಿಕ್ಕಬಳ್ಳಾಪುರ: ಹಣಕ್ಕಾಗಿ ಉದ್ಯಮಿಯನ್ನು ಅಪಹರಿಸಿ, ಸುಲಿಗೆ ಮಾಡಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ಬರ್ಕತ್ ವುಲ್ಲಾ (44), ಬೆಂಗಳೂರಿನ ತಾವರೆಕೆರೆಯ ಲೋಹಿತ್ ಕುಮಾರ್ (30), ಬೆಳ್ಳಂದೂರಿನ ಪ್ರವೀಣ್ (21), ಹುಳಿಮಾವಿನ ಭರತ್ (26), ಹೆಬ್ಬಾಳ ಎ.ಕೆ.ಕಾಲನಿಯ ಮಾರುತಿ ಪ್ರಸನ್ನ (32), ಕೋಲಾರದ ಚಿನ್ನಾಪುರದ ವೆಂಕಟೇಶ್ (24) ಬಂಧಿತರು. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಅಪಹರಣ, ಹಣ ಸುಲಿಗೆ, ಬೆದರಿಕೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ.
ಗಿರಿಧಾಮದ ತಪ್ಪಲಿನಲ್ಲಿ ಅಪಹರಣ
ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಸಾಗರಹಳ್ಳಿ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಕುಡುವತಿ ನವೀನ್ ಕುಮಾರ್ ಅವರನ್ನು ಜುಲೈ18ರಂದು ವಾಯುವಿಹಾರಕ್ಕೆ ಹೋಗುತ್ತಿದ್ದ ವೇಳೆ ಅಪಹರಿಸಿದ್ದ ಆರೋಪಿಗಳು 78 ಲಕ್ಷ ರೂ. ಸುಲಿಗೆ ಮಾಡಿದ್ದರು. ಹಾಗೆಯೇ ಬೆದರಿಕೆಯೊಡ್ಡಿ ಅವರ ಸಂಬಂಧಿಕರಿಂದ ಹಣ ತರಿಸಿಕೊಂಡಿದ್ದರು. ಕೊನೆಗೆ ಹಲವು ತಾಸಿನ ಬಳಿಕ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ನಂದಿ ಗಿರಿಧಾಮ ಠಾಣೆ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ತಂಡ ರಚನೆ
ಪ್ರಕರಣವನ್ನು ಭೇದಿಸಲು ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಮ್, ಡಿವೈಎಸ್ಪಿಗಳಾದ ಶಿವಕುಮಾರ್, ರವಿಕುಮಾರ್, ಸಿಪಿಐಗಳಾದ ಎಂ.ಮಂಜುನಾಥ್, ನಯಾಜ್ ಬೇಗ್ ಮತ್ತು ಸತ್ಯನಾರಾಯಣ, ಇನ್ಸ್ ಪೆಕ್ಟರ್ ಪ್ರಶಾಂತ್ ವರ್ಣಿ ಮತ್ತು ಸೂರ್ಯ ಪ್ರಕಾಶ್ ಹಾಗೂ ಇತರರನ್ನೊಳಗೊಂಡ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು.
ಸುಲಿಗೆ ಮಾಡಿದ್ದ ಹಣ ವಶ
ಆರೋಪಿ ಬರ್ಕತ್‌ನಿಂದ 9.50 ಲಕ್ಷ ರೂ., ರೋಹಿತ್‌ನಿಂದ 31.50 ಲಕ್ಷ ರೂ., ವಿವಿಧ ಕಂಪನಿಯ 7 ಮೊಬೈಲ್ ೆನ್‌ಗಳ ಜತೆಗೆ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಲಿಗೆಯೇ ವೃತ್ತಿ
ಬಂಧಿತ ಆರೋಪಿಗಳ ಪೈಕಿ ಬರ್ಕತ್‌ವುಲ್ಲಾ ದಿನಸಿ ಅಂಗಡಿ ವ್ಯಾಪಾರಿ, ಸಂತೋಷ್ ಡೆಲಿವರಿ ಬಾಯ್, ಭರತ್ ವಾಟರ್ ಟ್ಯಾಂಕರ್ ಡ್ರೈವರ್, ವೆಂಕಟೇಶ್ ಅಡುಗೆ ಕೆಲಸ, ಮಾರುತಿ ಪ್ರಸನ್ನ ಕಾರು ಚಾಲಕರಾಗಿದ್ದು, ಸುಲಿಗೆಯೇ ಇವರ ದೊಡ್ಡ ವೃತ್ತಿಯಾಗಿತ್ತು. ಪ್ರವೀಣ್ ವಿರುದ್ಧ ಅನುಗೊಂಡನಹಳ್ಳಿ, ಕೋಲಾರ, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿ, ಜೀವನ್‌ಬಿಮಾ ನಗರ, ಕೊತ್ತನೂರು, ಎಚ್.ಎಸ್.ಆರ್.ಬಡಾವಣೆ ಠಾಣೆಗಳಲ್ಲಿ, ಬರ್ಕತ್‌ವುಲ್ಲಾ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ವರ್ತೂರು ಪ್ರಕಾಶ್ ಪ್ರಕರಣ
ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಲೋಹಿತ್ ಸಹ ಇದ್ದ. 2020ರ ನ.25ರಂದು ರಾತ್ರಿ 7 ಗಂಟೆ ಕೋಲಾರದ ಬೆಗ್ಲಿಹೊಸಹಳ್ಳಿಯ ಾರಂ ಹೌಸ್‌ನಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸುಲಿಗೆಕೋರರ ತಂಡ ಮಾಜಿ ಶಾಸಕ ವರ್ತೂರು ಪ್ರಕಾಶ್ ಮತ್ತು ಚಾಲಕ ಸುನೀಲ್ ಅವರನ್ನು ಅಪಹರಿಸಿತ್ತು. ಕೊನೆಗೆ ಹಲ್ಲೆ ನಡೆಸಿದ್ದಲ್ಲದೇ ಬೆದರಿಸಿ 48 ಲಕ್ಷ ರೂ.ಗಳನ್ನು ಪಡೆದು ಬಿಟ್ಟು ಕಳುಹಿಸಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ಆರೋಪಿಯಾಗಿದ್ದ ಲೋಹಿತ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.