ಉದುರುತ್ತಿರುವ ಅಡಕೆ ಮಿಳ್ಳೆಗಳು, ಸಲಹೆ ನೀಡಲು ಮನವಿ

17 YLP 02
Published on

ಯಲ್ಲಾಪುರ: ತಾಲೂಕಿನ ಅಡಕೆ ತೋಟಗಳಲ್ಲಿ ಅಡಕೆ ಮಿಳ್ಳೆಗಳು ವ್ಯಾಪಕವಾಗಿ ಉದುರುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ ನೇತೃತ್ವದ ಜನಪ್ರತಿನಿಧಿಗಳ ನಿಯೋಗ ತೋಟಗಾರಿಕೆ ಅಧಿಕಾರಿಗಳನ್ನು ಆಗ್ರಹಿಸಿದೆ.

ತೋಟಗಾರಿಕಾ ಇಲಾಖೆಯ ಕಚೇರಿಗೆ ಬುಧವಾರ ಭೇಟಿ ನೀಡಿದ ಜಿಪಂ ಸದಸ್ಯರಾದ ಶ್ರುತಿ ಹೆಗಡೆ, ರೂಪಾ ಬೂರ್ಮನೆ, ತಾ.ಪಂ ಸದಸ್ಯರಾದ ನಾಗರಾಜ ಕವಡಿಕೆರೆ, ನಟರಾಜ ಗೌಡರ್ ಹಾಗೂ ಅಡಕೆ ಬೆಳೆಗಾರ ಗಣಪತಿ ಭಟ್ಟ ಉಬ್ಬಜ್ಜಿಪಾಲ ಅವರು ಉದುರಿದ ಅಡಕೆ ಮಿಳ್ಳೆಗಳನ್ನು ತಂದು ಇಲಾಖೆಯ ಅಧಿಕಾರಿಗಳೆದುರು ಪ್ರದರ್ಶಿಸಿದರು.

ಅಡಕೆ ಉದುರುವ ಸಮಸ್ಯೆ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಇಲಾಖೆಯ ಸಿಬ್ಬಂದಿಯನ್ನು ಪ್ರಶ್ನಿಸಿದರು. ನಿಯಂತ್ರಣಕ್ಕಾಗಿ ಅಡಕೆಗೆ ಸಿಂಪಡಿಸುವ ಔಷಧಗಳನ್ನು ರೈತರಿಗೆ ವಿತರಿಸುತ್ತಿರುವುದಾಗಿ ಇಲಾಖೆಯ ಸಿಬ್ಬಂದಿ ಜೂಜೆ ಫರ್ನಾಂಡೀಸ್, ಹೀನಾ ಶೇಖ್, ವೇದಾವತಿ ನಾಯ್ಕ ತಿಳಿಸಿದರು.

ಆದರೆ, ನಾಗರಾಜ ಕವಡಿಕೆರೆ ಹಾಗೂ ನಟರಾಜ ಗೌಡರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಇಲಾಖೆಯ ಸೌಲಭ್ಯಗಳು ಕೆಲವೇ ಕೆಲವು ರೈತರಿಗೆ ಸಿಗುತ್ತಿದೆ, ಉಳಿದ ರೈತರಿಗೆ ಅದರ ಮಾಹಿತಿ ಲಭ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ರೈತರಿಗೆ ಮಾಹಿತಿ ನೀಡುವ ಕಾರ್ಯಾಗಾರ ಏರ್ಪಡಿಸಬೇಕೆಂದು ಹೇಳಿದರು. ಹಿರಿಯ ಅಧಿಕಾರಿಗಳು ಇಲ್ಲದ ಕಾರಣ ಕಚೇರಿಯಲ್ಲಿದ್ದ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಬೆಳೆಗಾರರ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ನಿಯೋಗ ಇಲಾಖೆಗೆ ಮನವಿ ಸಲ್ಲಿಸಿತು.

ಅರಣ್ಯ ಇಲಾಖೆಗೆ ಮನವಿ: ನಂತರ ತಾ.ಪಂ ಅಧ್ಯಕ್ಷರ ನೇತೃತ್ವದ ನಿಯೋಗ ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಕಳಚೆ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯ ನಿಯಂತ್ರಣಕ್ಕೆ ಅಗಳ ಅಥವಾ ಬೇಲಿ ಹಾಕಬೇಕೆಂದು ಆಗ್ರಹಿಸಿ ಡಿಸಿಎಫ್ ಗೋಪಾಲಕೃಷ್ಣ ಹೆಗಡೆ ಅವರಿಗೆ ಮನವಿ ಸಲ್ಲಿಸಿತು. ಇದಕ್ಕೆ ಸ್ಪಂದಿಸಿದ ಡಿಸಿಎಫ್ ಸದ್ಯದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net