ಉದಾತ್ತ ಬದುಕಿಗೆ ವೇಮನರ ಸಂದೇಶ ಸಾಕ್ಷಿ

bkt-27-10
ಬಾಗಲಕೋಟೆ ನಗರದ ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯಲ್ಲಿ ಗುರುವಾರ ಜರುಗಿದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮ ವೇಮನಾನಂದ ಸ್ವಾಮೀಜಿ ಉದ್ಘಾಟಿಸಿದರು. ಮಹೇಶ ಕಕರಡ್ಡಿ, ಸಿ.ಕೆ.ಒಂಟಗೋಡಿ, ಜಿ.ಜಿ.ಹಿರೇಮಠ ಇದ್ದರು.
Published on

ಬಾಗಲಕೋಟೆ: ತತ್ವಜ್ಞಾನಿ, ಮಹಾಯೋಗಿ ವೇಮನರ ಸಂದೇಶಗಳು ಮನುಕುಲದ ಸಂತೋಷ, ಸಾರ್ಥಕ ಬದುಕಿಗೆ ಸಾಕ್ಷಿಯಾಗಿದ್ದು, ಅವು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜಿ.ಜಿ.ಹಿರೇಮಠ ಹೇಳಿದರು.

ನಗರದ ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಹಾಗೂ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ೬೧೧ ನೇ ಜಯಂತಿ ಹಾಗೂ ಮನೆ ಮನದಲ್ಲಿ ವೇಮನರ ತತ್ವ ಚಿಂತನದ ೧೪೮ ನೇ ಮಾಸಿಕ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದರು.
ವೇಮನರ ಪದ್ಯಗಳು ನಮ್ಮ ನಿತ್ಯ ಬದುಕಿನ ಸವಾಲುಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುತ್ತವೆ. ನೈತಿಕ ಬದುಕು ಕಟ್ಟಿಕೊಳ್ಳಲು ದಾರಿದೀಪಗಳಾಗಿವೆ. ನಿಜ ಸುಖದ ಬದುಕಿನ ಅರ್ಥ ಅವುಗಳಲ್ಲಿದೆ. ಅವರ ಚಿಂತನೆಗಳನ್ನು ನಾವು ಅರಿತು ನಡೆದರೆ ಬದಲಾವಣೆ ಸಾಧ್ಯವಲ್ಲದೇ ಅರ್ಥಪೂರ್ಣ ಜೀವನ ನಮ್ಮದಾಗುತ್ತದೆ ಎಂದರು.

ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ, ಶರಣರು, ಸಂತರು, ಯೋಗಿಗಳು ಹಾಗೂ ಮಹಾತ್ಮರು ನಮ್ಮ ಜೀವನವನ್ನು ಸ್ವರ್ಗ ಮಾಡಿಕೊಳ್ಳುವಂತಹ ಸಂದೇಶಗಳನ್ನು ನೀಡಿದ್ದು, ಅವುಗಳನ್ನು ಪಾಲಿಸಿ ಬದುಕಬೇಕು ಎಂದು ಹೇಳಿ, ಮಹಾಯೋಗಿ ವೇಮನರ ಸಂದೇಶ, ಹೇಮರಡ್ಡಿ ಮಲ್ಲಮ್ಮಳ ಆದರ್ಶತೆ ಮನುಕುಲದ ಬದುಕಿಗೆ ಎಂದೆಂದಿಗೂ ಪ್ರಸ್ತುತವಾಗಿರುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಅಧ್ಯಕ್ಷ ಮಹೇಶ ಕಕರಡ್ಡಿ, ಸಂಸ್ಥೆಯ ಪ್ರಗತಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿ ಸಮಾಜದ ಸಹಕಾರ ಕೋರಿದರು. ಹೇಮ ವೇಮನ ಸದ್ಬೋಧನ ಪೀಠದ ನಿರ್ದೇಶಕ ಸಿ.ಕೆ.ಒಂಟಗೋಡಿ ಅತಿಥಿಗಳಾಗಿದ್ದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿಯವರು ವೇಮನ ವಚನ ಪಠಿಸಿದರು. ಮಹೇಶ ವಾಸನದ ಸ್ವಾಗತಿಸಿದರು. ಈಶ್ವರ ಕೋನಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಬಾಳಕ್ಕನವರ ನಿರೂಪಿಸಿದರು. ರೇಣುಕಾ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net