ಉತ್ತರ ಕನ್ನಡದ ಹೋಟೆಲ್‌, ರೆಸಾರ್ಟ್‌ಗಳು ಭರ್ತಿ

22KWR3
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪ ಬರುತ್ತಿದ್ದಂತೆ ಜಿಲ್ಲೆಯ ಪ್ರವಾಸಿ ತಾಣಗಳು ಭರ್ತಿಯಾಗುತ್ತಿವೆ. ಕಾರವಾರ, ಮುರ್ಡೇಶ್ವರ, ಗೋಕರ್ಣ, ಭಟ್ಕಳ, ದಾಂಡೇಲಿ ಹೀಗೆ ಎಲ್ಲ ಪ್ರಸಿದ್ಧ ಸ್ಥಳಗಳಲ್ಲಿ ಜನಜಂಗುಳಿ ನೆರೆದಿದೆ.
ಸದ್ಯ ಕೆಲ ವಾರಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇನ್ನೆರಡು ದಿನದಲ್ಲಿ ಕ್ರಿಸ್‌ಮಸ್ ರಜೆಗಾಗಿ ಮಹಾ ನಗರಗಳಿಂದ ಮೋಜಿಗಾಗಿ ಬರುವವ ಪ್ರವಾಸಿಗರು ಹೆಚ್ಚುವ ನಿರೀಕ್ಷೆ ಇದೆ. ಈಗಾಗಲೇ ಮುರ್ಡೇಶ್ವರ, ಗೋಕರ್ಣ, ದಾಂಡೇಲಿ ಹಾಗೂ ಕಾರವಾರಗಳಲ್ಲಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳು ಶೇ. 90 ರಷ್ಟು ಬುಕ್ ಆಗಿವೆ. ಹೋಟೆಲ್‌ಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಕ್ರಿಸ್ ಮಸ್ ಟ್ರೀ, ಬಲೂನ್, ಅಳವಡಿಸಲಾಗಿದೆ. ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತಿದೆ.
ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್, ದೋಣಿ ವಿಹಾರ, ದಾಂಡೇಲಿಯಲ್ಲಿ ರ‍್ಯಾಫ್ಟಿಂಗ್‌ನAಥ ಜಲಸಾಹಸ ಕ್ರೀಡೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗೋಕರ್ಣ, ಯಾಣದಲ್ಲಿ ಧಾರ್ಮಿಕ ಕಾರ್ಯದ ಜತೆಗೆ ಸುಂದರ ಪ್ರಾಕೃತಿಕ ಸಂಪತ್ತನ್ನು ಆಸ್ವಾದಿಸಲೂ ಸಾಕಷ್ಟು ಜನ ಜಿಲ್ಲೆಗೆ ದಾಂಗುಡಿ ಇಡುತ್ತಿದ್ದಾರೆ. ನಡುವೆ ಹೊನ್ನಾವರ ಕಾಸರಕೋಡು ಇಕೋ ಬೀಚ್, ಕಾರವಾರದ ಟ್ಯಾಗೋರ್ ಕಡಲ ತೀರಗಳಲ್ಲಿ ಆಡಲು ಪ್ರವಾಸಿಗರು ಇಚ್ಛಿಸುತ್ತಿದ್ದಾರೆ.
ಪಾರ್ಕಿಂಗ್ ಗೋಳು:
ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ವಾಹನಗಳೂ ಹೆಚ್ಚಿವೆ. ಇಕಟ್ಟಿನ ಸ್ಥಳವಾಗಿರುವ ಮುರ್ಡೇಶ್ವರ ಹಾಗೂ ಗೋಕರ್ಣ ಎರಡೂ ಕಡೆ ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿದೆ. ಪ್ರವಾಸಿಗರು ಪಾರ್ಕಿಂಗ್‌ಗೆ ಜಾಗ ಹುಡುಕುವಂತಾಗಿದೆ. ಇದೇ ಕಾರಣಕ್ಕೆ ಸ್ಥಳೀಯ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವಿನ ಮಾತಿನ ಚಕಮಕಿ ಸಾಮಾನ್ಯವಾಗಿದೆ. ಪ್ರವಾಸಿಗರ ರಕ್ಷಣೆ ಹಾಗೂ ಸಂಚಾರ ಮೇಲ್ವಿಚಾರಣೆಗೆ ಎಲ್ಲೆಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಸ್ಥಳೀಯ ಆಡಳಿತಗಳು ಒತ್ತಾಯಿಸಿವೆ.
…………
ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರಿಗೆ ಸದಾ ಸ್ವಾಗತ. ಇಲ್ಲಿಗೆ ಬಂದ ಪ್ರವಾಸಿಗರು, ಕಡಲ ತೀರ, ನದಿಗಳಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು. ಜೀವ ರಕ್ಷಕ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೇ ಸ್ಥಳೀಯ ಆಡಳಿತಗಳಿಗೆ ಸಹಕರಿಸಬೇಕು.
ಜೆ.ಜಯಂತ್
ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net