

ಕಾರವಾರ: ಜಿಲ್ಲೆಯಲ್ಲಿ ಹಗಲು ಮೋಡ, ಬಿಸಿಲಿನ ವಾತಾವರಣವಿದ್ದು, ಸಾಯಂಕಾಲದ ಹೊತ್ತಿನಲ್ಲಿ ಗುಡುಗು, ಸಿಡಿಲು ಸಮೇತ ಅಲ್ಲಲ್ಲಿ ಭಾರಿ ಮಳೆಯಾಗುತ್ತಿದೆ. ಸೆ. 3ರಂದೂ ಹದವಾಗಿ ಮಳೆಯಾಗುವ ಮುನ್ಸೂಚನೆಯನ್ನು ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿದೆ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬುಧವಾರ ಹಾಗೂ ಗುರುವಾರ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಗೆ ಕೃಷಿ ಜಮೀನು ಹಾಗೂ ತೋಟಗಳಿಗೆ ಅಪಾರ ಹಾನಿಯಾಗಿದೆ. ಹಳ್ಳಗಳ ನೀರು ಉಕ್ಕಿ ನಾಟಿ ಮಾಡಿದ ಗದ್ದೆಗಳು ಕೊಚ್ಚಿ ಹೋಗಿವೆ. ಅಡಕೆ ತೋಟಗಳಲ್ಲಿ ಮಣ್ಣು ತುಂಬಿಕೊಂಡಿದೆ. ಕಳೆದ 48 ಗಂಟೆಗಳಲ್ಲಿ 1.17 ಹೆಕ್ಟೇರ್ ಕೃಷಿ ಹಾಗೂ 0.29 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಾಥಮಿಕ ವರದಿ ತಿಳಿಸಿದೆ.
ಬುಧವಾರ ಸುರಿದ ಮಳೆಯಿಂದ 2 ಮನೆಗಳು ಸಂಪೂರ್ಣ, 6 ಮನೆಗಳಿಗೆ ಭಾಗಶಃ ಹಾಗೂ 14 ಮನೆಗಳಿಗೆ ಅಲ್ಪ ಹಾನಿಯಾಗಿತ್ತು. ಮಂಡಗೋಡಿನಲ್ಲಿ ಒಂದು ಜಾನುವಾರು ಕೊಚ್ಚಿ ಹೋಗಿದೆ. ಗುರುವಾರ 1 ಮನೆ ಸಂಪೂರ್ಣ, 7 ಮನೆಗಳಿಗೆ ಭಾಗಶಃ ಹಾಗೂ 10 ಮನೆಗಳಿಗೆ ಅಲ್ಪ ಹಾನಿಯಾಗಿದೆ. 1 ಜಾನುವಾರು ಮೃತಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.