

ಕಾರವಾರ: ನಿಸರ್ಗ ಚಂಡಮಾರುತದಿಂದಾಗಿ ಕಾರವಾರದಲ್ಲಿ ಎರಡನೇ ದಿನವೂ ಭಾರಿ ಮಳೆಯಾಗಿದೆ. ಶಿರಸಿ ಸೇರಿ ಜಿಲ್ಲೆಯ ವಿವಿಧೆಡೆ ಹದವಾಗಿ ಮಳೆಯಾಗಿದೆ. ಬುಧವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕಾರವಾರದಲ್ಲಿ 154 ಮಿ.ಮೀ. ಮಳೆಯಾಗಿದೆ. ಬುಧವಾರ ಬೆಳಗ್ಗೆ 8 ರಿಂದ ಸಂಜೆ 5.30 ರವರೆಗೆ 124.1 ಮಿ.ಮೀ. ಮಳೆಯಾಗಿದೆ. ಮಧ್ಯಾಹ್ನ 3 ರ ನಂತರ ಮಳೆ ಕೊಂಚ ಬಿಡುವು ನೀಡಿದೆ. ಜಿಲ್ಲೆಯಲ್ಲಿ ಇನ್ನೂ ಒಂದು ದಿನ ಮಳೆ ಹಾಗೂ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಗಾ ಸಮೀಪ ನೀರು ತುಂಬಿದೆ. ಅರಗಾ, ಬಿಣಗಾ ಭಾಗದಲ್ಲಿ ಹೆದ್ದಾರಿಯ ಪಕ್ಕ ಗುಡ್ಡ ಕುಸಿತ ಪ್ರಾರಂಭವಾಗಿದೆ. ಭಾರಿ ಗಾಳಿಯಿಂದ ಕಾರವಾರದ ಮಾಜಾಳಿ, ದೇವಬಾಗ ಭಾಗದಲ್ಲಿ ಕಡಲ ಅಬ್ಬರ ಹೆಚ್ಚಿ ಸಮುದ್ರ ಕೊರೆತ ಉಂಟಾಗುತ್ತಿದೆ.
ರೈಲುಗಳ ಮಾರ್ಗ ಬದಲಾವಣೆ: ನಿಸರ್ಗದ ಚಂಡಮಾರುತದ ಕಾರಣದಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ತೆರಳಬೇಕಿದ್ದ 3 ವಿಶೇಷ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಮಂಗಳವಾರ ತೆರಳಬೇಕಿದ್ದ ಎರ್ನಾಕುಲಂ- ಹಜರತ್ ನಿಜಾಮುದ್ದೀನ್, ತಿರುವನಂತಪುರಂ- ಮುಂಬೈ ರೈಲುಗಳನ್ನು ಮಡಗಾಂವ್ ಜಂಕ್ಷನ್ನಿಂದ ಲೋಂಡಾ, ಮೀರಜ್- ಪುಣೆ ಮಾರ್ಗವಾಗಿ ಓಡಿಸಲಾಗುತ್ತಿದೆ. ನವದೆಹಲಿ- ತಿರುವನಂತಪುರಂ ರೈಲನ್ನು ಸೂರತ್, ವಾಸೈರೋಡ್, ಕಲ್ಯಾಣ, ಮೀರಜ್ ಲೋಂಡಾ, ಮಡಗಾಂವ ಮಾರ್ಗವಾಗಿ ಓಡಿಸಲಾಗುತ್ತಿದೆ. ಮುಂಬೈ- ತಿರುವನಂತಪುರಂ ವಿಶೇಷ ರೈಲನ್ನು ಬುಧವಾರ 18 ತಾಸು ವಿಳಂಬವಾಗಿ ಓಡಿಸಲಾಗಿದೆ.
ಎರಡೇ ದಿನದಲ್ಲಿ 72 ಕಂಬ ನಷ್ಟ
ಭಾರಿ ಗಾಳಿ ಮಳೆಯಿಂದ ಹೆಸ್ಕಾಂಗೆ ಎರಡೇ ದಿನದಲ್ಲಿ 8 ಲಕ್ಷ ರೂ. ನಷ್ಟವಾಗಿದೆ. ಕಾರವಾರ, ಅಂಕೋಲಾ ಉಪವಿಭಾಗದಲ್ಲಿ ಒಟ್ಟು 72 ಕಂಬಗಳು ಮುರಿದು ಬಿದ್ದಿದ್ದು, 9 ಟ್ರಾನ್ಸ್ಫಾರ್ಮರ್ಗಳು ಹಾನಿಯಾಗಿವೆ. ಮೊದಲ ಮಳೆಗೆ ಇನ್ಸುಲೇಟರ್ಗಳು ಒಡೆದು ಹಾನಿಯಾಗಿ ವಿದ್ಯುತ್ ಆಗಾಗ ಕೈ ಕೊಡುತ್ತಿದ್ದು, ಅದರ ದುರಸ್ತಿಗೆ ಹೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ದಡ ಸೇರಿದ ಮೀನುಗಾರರು
ಗೋವಾ ತೀರದಿಂದ 27 ನಾಟಿಕಲ್ ಮೈಲ್ ಹೊರಗೆ ಬೋಟ್ ಮುಳುಗಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರು ಇನ್ನೊಂದು ಬೋಟ್ ಸಹಾಯದಿಂದ ದಡ ಸೇರಿದ್ದಾರೆ. ಮಲ್ಪೆಯ ವಡಭಾಂಡೇಶ್ವರ ದೀಪಿಕಾ ಎಂಬುವವರ ಶ್ರೀ ದುರ್ಗಾ ಹನುಮ ಬೋಟ್ ಮಂಗಳವಾರ ಮುಳುಗಡೆಯಾಗಿದೆ. ಅದರಲ್ಲಿದ್ದ ಉತ್ತರ ಕನ್ನಡದ ಕೇಶವ ಮಾದೇವ ಮೊಗೇರ, ನಾಗರಾಜ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ, ಈಶ್ವರ ವೆಂಕಟರಮಣ ಹರಿಕಂತ್ರ, ದಿನೇಶ ಜಟ್ಟ ಮೊಗೇರ, ಗುರುರಾಜ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಂತ್ರ ಎಂಬುವವರು ಇನ್ನೊಂದು ಬೋಟ್ ಸಹಾಯದಿಂದ ಸುರಕ್ಷಿತವಾಗಿ ಗೋವಾದ ವಾಸ್ಕೋ ತಲುಪಿದ್ದಾರೆ.
ತಾಲೂಕುವಾರು ಮಳೆ ವಿವರ: ಅಂಕೋಲಾದಲ್ಲಿ 53.6 ಮಿಮೀ, ಭಟ್ಕಳ-20, ಹೊನ್ನಾವರ-83.3, ಕುಮಟಾ-54.5, ಮುಂಡಗೋಡ-8.8, ಸಿದ್ದಾಪುರ-6.4, ಶಿರಸಿ-24.5, ಜೊಯಿಡಾ- 26.6, ಯಲ್ಲಾಪುರದಲ್ಲಿ 27.6 ಮಿಮೀ ಮಳೆಯಾಗಿದೆ.
ಮಿಂಚು ಗುಡುಗಿನೊಂದಿಗೆ ಮಳೆಯ ಆರ್ಭಟ
ಕುಮಟಾ: ತಾಲೂಕಿನಾದ್ಯಂತ ಮಿಂಚು ಗುಡುಗಿನೊಂದಿಗೆ ಬುಧವಾರ ಉತ್ತಮ ಮಳೆಯಾಗಿದೆ. ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದರೂ ಜೋರಾಗಿ ಮಳೆ ಬಂದಿರಲಿಲ್ಲ. ಆದರೆ, ಬುಧವಾರ ಬೆಳಗಿನ ಜಾವದ ನಂತರ ಗಾಳಿಯೊಂದಿಗೆ ಜೋರಾದ ಮಳೆ ಸುರಿಯಿತು. ಪಟ್ಟಣದ ಪ್ರಮುಖ ರಸ್ತೆ ಹಾಗೂ ಸಣ್ಣ ಓಣಿಗಳಲ್ಲಿ ಮೊಣಕಾಲ ಮಟ್ಟಕ್ಕೆ ನೀರು ತುಂಬಿ ಹರಿದಿದೆ. ಬತ್ತುವ ಹಂತದಲ್ಲಿದ್ದ ಕೆರೆ, ಬಾವಿಗಳಲ್ಲಿ ನೀರು ಸಂಗ್ರಹವಾಗಿದೆ.
ಎರಡು ವರ್ಷದ ಹಿಂದೆ ಗುಡ್ಡ ಕುಸಿತದಿಂದ ಪ್ರಾಣ ಹಾನಿಯಾಗಿದ್ದ ತಂಡ್ರಕುಳಿಯಲ್ಲಿ ಈ ಬಾರಿಯ ಮೊದಲ ಮಳೆ ಸ್ವಲ್ಪ ಭಯವನ್ನೇ ಹುಟ್ಟಿಸಿದೆ. ತಂಡ್ರಕುಳಿ ಜನವಸತಿ ಪ್ರದೇಶದ ಮೇಲ್ಗಡೆ ಇರುವ ಕಡಿದಾದ ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದು ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಮಗುಚಿಕೊಂಡು ವಾಹನಗಳ ಸಂಚಾರಕ್ಕೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ರಸ್ತೆಯ ಒಂದೇ ಮಗ್ಗುಲಲ್ಲಿ ಮಾತ್ರ ವಾಹನಗಳ ಓಡಾಟ ಸಾಧ್ಯವಾಗಿತ್ತು. ರಸ್ತೆಯ ಮೇಲಿನ ನೀರಿನ ಹರಿವನ್ನು ದಾಟಲು ವಾಹನಗಳು ಸರತಿಯಲ್ಲಿ ಕಾಯುವಂತಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಯಂತ್ರ ಬಳಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದರು. ಉಳಿದಂತೆ ಎಲ್ಲಿಯೂ ಗಾಳಿ, ಮಳೆಗೆ ಹಾನಿಯಾದ ವರದಿಯಾಗಿಲ್ಲ. ರೈತಾಪಿ ಕಸುಬಿನವರಿಗೆ ಆಶಾದಾಯಕ ವಾತಾವರಣ ಕಂಡು ಬಂದಿದ್ದು, ಕೃಷಿಕರ ಮೊಗದಲ್ಲಿ ಸಂತಸ ಮೂಡಿಸಿದೆ.