ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆ

31-sdp- photo
Published on

ಕಾರವಾರ: ಜಿಲ್ಲೆಯ ವಿವಿಧೆಡೆ ಭಾನುವಾರ ಭಾರಿ ಮಳೆ ಸುರಿಯಿತು. ಭಾನುವಾರ ಬೆಳಗಿನಜಾವ ಕರಾವಳಿಯಲ್ಲಿ ಗುಡುಗು, ಸಿಡಿಲು ಸಮೇತ ಅಂದಾಜು ಅರ್ಧ ಗಂಟೆ ಮಳೆಯಾಗಿದೆ. ನಂತರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಮಾನ್ಯ ಮಳೆಯಾಗಿದೆ. ಸಿಡಿಲು ಬಡಿದು ಭಟ್ಕಳದ ಶಿರಾಲಿ ಗ್ರಾಮದ ಬಸಪ್ಪನಕೊಡ್ಲು ದೇವಯ್ಯ ಹಾದಿ ನಾಯ್ಕ ಅವರ ಮನೆಯ ಗೋಡೆ ಕುಸಿದಿದೆ.

ಭಾನುವಾರ ಬೆಳಗಿನ ವರದಿಯಂತೆ ಕಾರವಾರದಲ್ಲಿ 17.4 ಮಿಮೀ, ಅಂಕೋಲಾದಲ್ಲಿ 10.8 ಮಿಮೀ, ಕುಮಟಾದಲ್ಲಿ 24.4 ಮಿಮೀ, ಹೊನ್ನಾವರದಲ್ಲಿ 30.9 ಮಿಮೀ, ಭಟ್ಕಳದಲ್ಲಿ 34.6 ಮಿಮೀ, ಶಿರಸಿಯಲ್ಲಿ 2.5 ಮಿಮೀ, ಸಿದ್ದಾಪುರದಲ್ಲಿ 1.2 ಮಿಮೀ ಮಳೆಯಾಗಿದೆ. ದಾಂಡೇಲಿಯಲ್ಲಿ ಸಂಜೆಯ ಹೊತ್ತಿಗೆ ಗುಡುಗು, ಸಿಡಿಲಿನ ಜತೆ ಜೋರಾಗಿ ಮಳೆಯಾಗಿದೆ. ಮುಂಡಗೋಡದಲ್ಲಿ ಮಧ್ಯಾಹ್ನದ ನಂತರ ಸಣ್ಣ ಮಳೆ ಪ್ರಾರಂಭವಾಗಿದೆ. ಹಳಿಯಾಳ, ಶಿರಸಿ, ಯಲ್ಲಾಪುರದಲ್ಲಿ ಇಡೀ ದಿನ ಆಗಾಗ ಸಣ್ಣ ಮಳೆಯಾಗಿದೆ. ಸಿದ್ದಾಪುರದಲ್ಲಿ ಇಡೀ ದಿನ ಉತ್ತಮ ಮಳೆ ಸುರಿದಿದೆ.

ಇನ್ನೂ ಎರಡು ದಿನ ಮಳೆ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡ ಮಾರುತ ಜೂನ್ 3ರ ಹೊತ್ತಿಗೆ ಉತ್ತರ ಮಹಾರಾಷ್ಟ್ರ ಅಥವಾ ಗುಜರಾತ್ ಬಳಿ ಅಪ್ಪಳಿಸಲಿದೆ. ಜೂನ್ 2ರವರೆಗೂ ಜಿಲ್ಲೆಯ ಕರಾವಳಿಯಲ್ಲಿ ಮೋಡ, ಆಗಾಗ ಮಳೆ ಹಾಗೂ ಗುಡುಗು, ಸಿಡಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕಿತ್ತಳೆ ಅಲರ್ಟ್ ಎಂದು ಘೊಷಿಸಲಾಗಿದೆ. ಇನ್ನು ಒಮಾನ್ ದೇಶದ ಸಮೀಪ ವಾಯು ಭಾರ ಕುಸಿತದಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು, ಅದರಿಂದಲೂ ಪ್ರಭಾವವಾಗಲಿದೆ. ಅಷ್ಟು ಹೊತ್ತಿಗಾಗಲೇ ನೈರುತ್ಯ ಮಾನ್ಸೂನ್ ಪ್ರಭಾವ ಉಂಟಾಗುವುದರಿಂದ ಜಿಲ್ಲೆಯಲ್ಲಿ ಇಡೀ ವಾರ ಮಳೆಯ ವಾತಾವರಣ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿಡಿಲಿಗೆ ಮಹಿಳೆ ಬಲಿ
ಗೋಕರ್ಣ
: ಮಲಗಿದ್ದ ವೇಳೆ ಸಿಡಿಲು ಬಡಿದಿದ್ದರಿಂದ ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ಸಮೀಪದ ದೇವಣ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಶೋಭಾ ಚಂದ್ರಕಾಂತ ಗೌಡ (37) ಮೃತಪಟ್ಟವರು. ಪ್ರಕರಣ ದಾಖಲಾಗಿದೆ.
ಗೋಕರ್ಣ ಭಾಗದಲ್ಲಿ ಭಾನುವಾರ ಬೆಳಗಿನ ಜಾವ ಭಾರಿ ಮಿಂಚು, ಗುಡುಗು ಸಹಿತ ಮಳೆ ಸುರಿದಿದೆ. ಬೆಳಗ್ಗೆ ಏಳು ಗಂಟೆವರೆಗೂ ಮಳೆ ಸುರಿದಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net