

ವಿಜಯವಾಣಿ ಸುದ್ದಿಜಾಲ ಕಾರವಾರ
ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ವಿಚಾರ ಮತ್ತೆ ಚಚೆಗೆ ಬಂದಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಟ್ಟ ಚುನಾವಣಾ ಅಸ್ತ್ರಕ್ಕೆ ಜಿಲ್ಲೆಯಲ್ಲಿ ಪರ, ವಿರೋಧರರ ಮಾತುಗಳು ಕೇಳಿ ಬರುತ್ತಿವೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಜಿಲ್ಲೆ ವಿಭಜನೆ ಬಗ್ಗೆ ಮಾತನಾಡಲು ನಾನು ಜಿಲ್ಲಾ ಉಸ್ತುವಾರಿ ಸಚಿವನಲ್ಲ ಎಂದಿದ್ದರು. ಈಗ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದಾರೆ.
ಜಿಲ್ಲೆ ವಿಭಜನೆಯಿಂದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿಭಜನೆಯ ವಿಚಾರದಲ್ಲೂ ಸಾಬೀತಾಗಿದೆ. ಪ್ರತ್ಯೇಕವಾದಲ್ಲಿ ಹೆಚ್ಚು ಅನುದಾನ ಹರಿದು ಬರುತ್ತದೆ ಆದರೆ, ವಿಭಜನೆಯಿಂದ ಕೆಲವರಿಗೆ ಭಾವನಾತ್ಮಕವಾಗಿ ಸಮಾಧಾನವಿಲ್ಲ. ಇದೇನು ರಾಜ್ಯ ವಿಭಜನೆಯಲ್ಲ, ಅಭಿವೃದ್ಧಿ ದೃಷ್ಟಿಯಿಂದ, ಭಾವನಾತ್ಮಕ ವಿಷಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ವಿಭಜನೆಯ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಈ ಬಗ್ಗೆ ವಿಧಾನಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ ಹಾಗೂ ಎಲ್ಲ ಶಾಸಕರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.