

ನಾಪೋಕ್ಲು: ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದು ಬೆಂಗಳೂರು ಜ್ಯೋತಿ ನಿವಾಸ್ ಕಾಲೇಜಿನ ನಿವೃತ್ತಿ ಡೀನ್ ಹಾಗೂ ಉಪ ಪ್ರಾಂಶುಪಾಲ ಕಾಂಡಂಡ ಉಷಾ ಜೋಯಪ್ಪ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಪೋಕ್ಲು ಸಹಕಾರ ಮಹಿಳಾ ಸಮಾಜದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ತಾಯಿ ತನ್ನ ಮಕ್ಕಳನ್ನು ತಿಳಿದಷ್ಟು ಬೇರೆಯವರು ತಿಳಿಯಲು ಸಾಧ್ಯವಿಲ್ಲ ಎಂದ ಅವರು, ಮಕ್ಕಳನ್ನು ಮೊಬೈಲ್‌ಗೆ ದಾಸರಾಗುವಂತೆ ಪ್ರೇರೇಪಿಸದೆ ಸದ್ಗುಣಗಳನ್ನು ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಕನಸನ್ನು ಸಾಕಾರಗೊಳಿಸಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ವಹಿಸಿ ಮಾತನಾಡಿ, ಮಹಿಳಾ ಸಮಾಜದ ಕಾರ್ಯದಕ್ಷತೆಯ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ರೂಪುರೇಷೆಗಳ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿ ಎಲ್ಲರೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರಾದ ಬಿದ್ದಾಟಂಡ ಗಿರಿಜಾ ಬೋಪಣ್ಣ, ಮುಂಡಂಡ ಸುಶೀಲಾ ಸೋಮಣ್ಣ, ಕೇಟೋಳಿರ ಶಾರದಾ ಪಳಂಗಪ್ಪ , ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡಿಯೊಳಂಡ ಕವಿತಾ ಮುತ್ತಣ್ಣ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ ಭೀಮಯ್ಯ, ಕಾರ್ಯದರ್ಶಿ ಕೆ.ಎಚ್.ರಾಜೇಶ್ವರಿ ಲೋಕೇಶ್ , ಸಮಾಜದ ಸದಸ್ಯರು ಹಾಜರಿದ್ದರು.