ಉತ್ತಮ ಭವಿಷ್ಯಕ್ಕೆ ಎಸ್ಸೆಸ್ಸೆಲ್ಸಿ ಭದ್ರ ಬುನಾದಿ

02 hkr 01
Published on

ಹಿರೇಕೆರೂರ: ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಭದ್ರ ಬುನಾದಿ. ಪಿಯುಸಿಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಮಾತ್ರ ಮುಂದಿನ ಎಲ್ಲ ಉನ್ನತ ಶಿಕ್ಷಣದ ಹಾದಿ ಸುಗಮವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ 17 ವಿದ್ಯಾರ್ಥಿಗಳಿಗೆ ತಾಲೂಕಿನ ಬಾಳಂಬೀಡ ಗ್ರಾಮದ ಕೌರವ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ವೈಯಕ್ತಿಕವಾಗಿ 5 ಸಾವಿರ ರೂ. ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅವರು ಮಾತನಾಡಿದರು. ಕರೊನಾ ಭೀತಿ ನಡುವೆ ಸರ್ಕಾರ ಕೆಲ ದಿಟ್ಟ ನಿರ್ಧಾರ ಹಾಗೂ ಮುಂಜಾಗ್ರತೆ ವಹಿಸಿ ಯಾವುದೇ ತೊಂದರೆಯಾಗದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ಸಿಯಾಗಿ ನಡೆಸಿದೆ. ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಹುದ್ದೆಗಳಿಗೆ ಸೀಮಿತವಾಗದೆ, ಉನ್ನತ ಶಿಕ್ಷಣಗಳಾದ ಐಎಎಸ್, ಐಪಿಎಸ್ ಪಾಸ್ ಮಾಡುವ ಗುರಿ ಹೊಂದಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಉನ್ನತ ಸಾಧನೆ ಮಾಡಬೇಕು ಎಂದರು.

ಕೌರವ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಾಲೂಕಿನ 17 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿನಿಯರು ಇರುವುದು ಹೆಮ್ಮೆಯ ವಿಷಯ ಎಂದರು.

ಬಿಇಒ ಸಿದ್ದಲಿಂಗಪ್ಪ ಎಲ್., ಮಾತನಾಡಿ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಎಸ್ಸೆಸ್ಸಲ್ಸಿ ಹೆಚ್ಚು ಅಂಕ ಗಳಿಇಸ ಎರಡೂ ವಿದ್ಯಾರ್ಥಿಗಳಿಗೆ ವೈಯಕ್ತಿವಾಗಿ ತಲಾ 5 ಸಾವಿರ ರೂ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎನ್. ಸುರೇಶಕುಮಾರ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಬಳಿಗಾರ, ಪಾಲಕರು, ವಿದ್ಯಾರ್ಥಿಗಳು ಇದ್ದರು. ಮುಖ್ಯಶಿಕ್ಷಕ ಅಂಬರೀಶ ಹೂಗಾರ, ಪ್ರಾಚಾರ್ಯ ಶಾಂತೇಶ ಪೂಜಾರ, ಸಹಶಿಕ್ಷಕ ನಂದೀಶ ಪುರದಾಳ ಕಾರ್ಯಕ್ರಮ ನಿರ್ವಹಿಸಿದರು.

ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 5 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗುವುದು. ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು.| ಬಿ.ಸಿ. ಪಾಟೀಲ ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net