

ಶಿರಸಿ: ಹೈನುಗಾರರಿಗೆ ಗುಣಮಟ್ಟದ ಪಶು ಆಹಾರ ಲಭ್ಯವಾದರೆ ಹಾಲಿನ ಗುಣಮಟ್ಟವೂ ಹೆಚ್ಚುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅಭಿಪ್ರಾಯಪಟ್ಟರು.
ನಗರದ ಟಿಎಂಎಸ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ದಿನ ಹಾಗೂ ಅಮುಲ್ ಪಶು ಆಹಾರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಶು ಆಹಾರವನ್ನೇ ನೆಚ್ಚಿಕೊಂಡು ಶೇ. 90ರಷ್ಟು ಹೈನೋದ್ಯಮ ನಡೆಯುತ್ತಿದೆ. ಗುಣಮಟ್ಟದ ಪಶು ಆಹಾರ ಇದ್ದರೆ ಅದನ್ನು ಹೈನುಗಾರರು ಬಳಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಹಾಲಿಗೆ ಬರಗಾಲವಿತ್ತು. ಆದರೆ, ಮಿಶ್ರತಳಿಯ ರಾಸುಗಳು ಬಂದ ನಂತರ ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ. ಆದರೆ, ಹಾಲಿನ ಗುಣಮಟ್ಟ ಬೇಕಾಗಿದೆ ಎಂದರು.
ಪಶುವೈದ್ಯ ಪಿ.ಎಸ್. ಹೆಗಡೆ ಮಾತನಾಡಿ, ಸಾಕಷ್ಟು ಪಶು ಆಹಾರಗಳು ಮಾರುಕಟ್ಟೆಗೆ ಬಂದರೂ ನಿರೀಕ್ಷೆಯಷ್ಟು ಗುಣಮಟ್ಟ ಕಂಡುಬಂದಿಲ್ಲ. ಪಶು ಆಹಾರದಲ್ಲಿ ನಾರಿನಂಶ ಮುಖ್ಯವಲ್ಲ, ಪ್ರೋಟಿನ್ ಶಕ್ತಿ ಅಗತ್ಯ ಎಂದರು.
ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ, ವೇದಾ ಹೆಗಡೆ ನೀರ್ನಳ್ಳಿ, ಅಮುಲ್ ಅಧಿಕಾರಿ ಸುನೀಲ ಸೋನಕರ್, ನವೀನ್ ಜಾಧವ, ಚೇತನ ಜಾಧವ ಮುಂತಾದವರು ಉಪಸ್ಥಿತರಿದ್ದರು. ನರೇಂದ್ರ ಜಾಧವ ನಿರೂಪಿಸಿದರು.