ಉತ್ತಮ ಗುಣ ಬೆಳೆಸುವುದೇ ಗುರಿ

3gkn1-a2-
Published on

ಗೋಕರ್ಣ: ಉತ್ತಮ ಗುಣ ಪರಿಪೂರ್ಣ ಮನುಷ್ಯರನ್ನು ನಿರ್ಮಾಣ ಮಾಡಬಲ್ಲ ದೇಶಪ್ರೇಮ, ಧರ್ಮನಿಷ್ಠೆ, ಗುರುಭಕ್ತಿ ಮತ್ತು ದೇವಭಾವದಿಂದ ತುಂಬಿದ ಶಿಕ್ಷಣ ಇಂದಿನ ವಿಶ್ವದ ಅಗತ್ಯವಾಗಿದೆ.

ಈ ನಾಲ್ಕು ಗುಣ ಸಂಸ್ಕಾರವನ್ನು ಪಡೆದಿರದ ಮನುಷ್ಯರು ಮನುಷ್ಯರಲ್ಲ. ಈ ಗುಣಗಳಿಂದ ಕೂಡಿದ ಮನುಕುಲವನ್ನು ಸಿದ್ಧ ಪಡಿಸುವ ಮೂಲ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠ ಮತ್ತು ಎರಡು ಸರ್ವಭಿನ್ನ ಗುರುಕುಲಗಳ ನಿರ್ವಣಕ್ಕೆ ಮುಂದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಹನುಮಾನ್ ಜನ್ಮಭೂಮಿ ಸಮೀಪ ಸಾರ್ವಭೌಮ ಮತ್ತು ರಾಜರಾಜೇಶ್ವರಿ ಗುರುಕುಲಗಳ ಪರಿಸರದಲ್ಲಿ ನಿರ್ವಿುಸಲಾದ ‘ಶಿಖರಶ್ರೀ’ ಶ್ರೀಗುರುನಿವಾಸವನ್ನು ಸೋಮವಾರ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನವಿತ್ತರು.

ಸರ್ವವಿದ್ಯಾ ಕೇಂದ್ರ: ಗೋಕರ್ಣ ಪರಂಪರೆಯಿಂದ ಹಲವು ಅನನ್ಯತೆಗಳ ಸಂಗಮ. ಒಂದು ಕಾಲದಲ್ಲಿ ಗೋಕರ್ಣ ವಿದ್ಯಾಕಾಶಿ ಆಗಿತ್ತು. ಆತ್ಮಲಿಂಗರೂಪಿ ಮಹಾಬಲೇಶ್ವರ ಸ್ವಯಂ ವಿದ್ಯೇಶ್ವರ. ಇದರ ಜೊತೆಗೆ ಸರ್ವವಿದ್ಯಾ ವಿಶಾರದ ಆಂಜನೇಯ ಜನಿಸಿದ ಪುಣ್ಯ ತಾಣ ಗೋಕರ್ಣ. ಇಂತಹ ಗೋಕರ್ಣ ಬೇರೆ ಕಾರಣಗಳಿಗಿಂತ ವಿದ್ಯೆಯ ಕಾರಣಕ್ಕೆ ಇನ್ನು ಮುಂದೆ ಗುರುತಿಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಈ ನೆಲದಿಂದ ಅಖಿಲವಾದ ಎಲ್ಲ ವಿದ್ಯೆಗಳು ಮತ್ತೆ ವಿಕಸಿಸಿ ಇಲ್ಲಿ ಪ್ರಾಣಾಂಕುರ ಮಾಡುವಂತಾಗಬೇಕು. ಅನನ್ಯತೆಗಳ ಆಗರವಾದ ಗೋಕರ್ಣದಲ್ಲಿ ಮತ್ತೊಂದು ಅನನ್ಯತೆಯನ್ನು ಸೇರಿಸುವ ಪ್ರಯತ್ನವೇ ಈ ಎಲ್ಲ ವಿದ್ಯಾಕೇಂದ್ರಗಳ ಪ್ರಾರಂಭ ಎಂದರು.

ರಾಷ್ಟ್ರೀಯ ಮುಕ್ತ ವಿದ್ಯಾ ಸಂಸ್ಥೆಯ (ಎನ್​ಐಒಎಸ್) ಪಠ್ಯಕ್ರಮದ ಈ ತಾಣ ಪಾರಂಪರಿಕ ಮತ್ತು ಆಧುನಿಕ ವಿದ್ಯೆಗಳಿಂದ ಸಮ್ಮಿಳಿತವಾದ ಶಿಕ್ಷಣಕ್ಕೆ ವಿಶ್ವ ಖ್ಯಾತವಾಗಲಿ.ಈ ಶಿಕ್ಷಣ ಲೋಕದಿಂದ ಹಲವರ ಬಾಳು ಬೆಳಕಾಗಲಿ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಬಕವಿ ಶ್ರೀಗುರುದೇವ ಬ್ರಹ್ಮಾನಂದ ಮಠಾಧೀಶ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ರಾಷ್ಟ್ರೀಯ ಮುಕ್ತ ವಿದ್ಯಾ ಸಂಸ್ಥೆ (ಎನ್​ಐಒಎಸ್) ನಿರ್ದೇಶಕ ಸತೀಶ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎನ್​ಐಒಸಿ ಅಧಿಕಾರಿ ಶಂಕರ ಮಾತನಾಡಿದರು.ಗುರುಕುಲಗಳ ಪಠ್ಯ ನಿರ್ವಹಣಾ ಸಮಿತಿಯ ಮುಖ್ಯಸ್ಥೆ ಶಾರದಾ ಪಿ.ಎಸ್. ಗುರುಕುಲಗಳ ವಿಸ್ತ್ರತ ಪರಿಚಯವಿತ್ತರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ,ತಾಪಂ ಇಒ ಸಿ.ಟಿ.ನಾಯ್ಕ,ಪಂಚಾಯತಿ ಆಡಳಿತಾಧಿಕಾರಿ ಆರ್.ಜಿ.ಗುನಗಿ,ಬಿಇಒ ರಾಜೇಂದ್ರ ಭಟ್ಟ ಉಪಸ್ಥಿತರಿದ್ದರು.

ಶ್ರೀ ಮಠದ ಮಾಧ್ಯಮ ಪ್ರತಿನಿಧಿ ಮೋಹನ ಹೆಗಡೆ ಪ್ರಸ್ತಾಪಿಸಿದರು. ಪ್ರಮೋದ ಮೋಹನ ಹೆಗಡೆ, ಗಣೇಶ ಜೋಶಿ ನಿರ್ವಹಿಸಿದರು.

ಗುರುಕುಲ ಸಮಿತಿಯ ಮಹೇಶ ಶೆಟ್ಟಿ ಸಭಾಪೂಜೆ ಮತ್ತು ಅಭಿನಂದನೆ ನಿರ್ವಹಿಸಿದರು.

ಸಮಿತಿ ಸದಸ್ಯರಾದ ನಾಗೇಶ ಗಣಪು ಗೌಡ, ನಾಗರಾಜ ಹಿತ್ತಲಮಕ್ಕಿ, ಚಂದ್ರಕಾಂತ ಶೆಟ್ಟಿ ಬಂಕಿಕೊಡ್ಲ, ವಾಮನ ಸುಬ್ರಾಯ ಪೈ, ಸುರೇಂದ್ರ ಟೇಂಗ್ಸೆ, ವಾಸುದೇವ ಶ್ರೀಧರ ಕಾಮತ, ಡಾ.ರಾಮಚಂದ್ರ ಮಲ್ಲನ್, ರಮೇಶ ಪಂಡಿತ, ಶೇಖರ ನಾಯ್ಕ ಮುಂತಾದವರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net