

ಸವಣೂರ: ಇಂದಿನ ಯುವ ಜನಾಂಗ ಮಾದಕ ವ್ಯಸನಗಳಿಗೆ ಬಲಿಯಾಗಿ ಆರೋಗ್ಯದ ಜೊತೆ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೀಶ್ವರ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಶಿಗ್ಗಾಂವಿ ಉಪವಿಭಾಗದ ಹಾಗೂ ಸವಣೂರ ಪೊಲೀಸ್ ಠಾಣೆಯ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗೂ ಮಾನವ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ದುರ್ವ್ಯಸನಗಳಿಂದ ದೂರವಿದ್ದಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.
ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಾದಕ ವಸ್ತುಗಳನ್ನು ಸಾಗಾಟ ಮಾಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಯುವ ಜನತೆ ಜಾಗ್ರತಗೊಂಡು ಆರೋಗ್ಯ ಪೂರ್ಣ ಸಮಾಜ ನಿರ್ವಣಕ್ಕೆ ಶ್ರಮಿಸಬೇಕು ಎಂದರು.
ಪಾದಯಾತ್ರೆಯು ಕಂದಾಯ ಇಲಾಖೆ ಆವರಣದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಂದಾಯ ಆವರಣದಲ್ಲಿ ಸಮಾರೋಪಗೊಂಡಿತು.
ಎಸಿ ಅನ್ನಪೂರ್ಣ ಮುದುಕಮ್ಮನವರ, ಡಿವೈಎಸ್ಪಿ ಕಲ್ಲೇಶಪ್ಪ ಒ.ಬಿ., ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಇಒ ಮುನಿಯಪ್ಪ ಪಿ., ಸಿಪಿಐ ಶಿಶಧರ ಜಿ.ಎಂ., ಬಸವರಾಜ ಹಳಬಣ್ಣವರ, ಪಿಎಸ್ಐಗಳಾದ ಸಂತೋಷ ಪಾಟೀಲ, ಮಂಜುನಾಥ ಬಿ.ಎನ್., ಎಚ್.ಎಸ್. ಶಿವಣ್ಣವರ ಸೇರಿ ಕಂದಾಯ, ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.