ಉಚ್ಛಾಟನೆಗೆ ಕಾರಣ ಕೊಡಿ

bkt-29-11
ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಬಿಜೆಪಿ ಉಚ್ಛಾಟಿತ ಮುಖಂಡ ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿತ್ರದಲ್ಲಿ ಸಂತೋಷ ಹೊಕ್ರಾಣಿ, ಅರುಣ ಲೋಕಾಪುರ, ಗುರು ಅನಗವಾಡಿ ಮತ್ತಿತರರು ಇದ್ದರು.
Published on

ಬಾಗಲಕೋಟೆ: ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಾಗಲಕೋಟೆ ಶಾಸಕರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ನೋಟಿಸ್ ನೀಡದೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆಂದು ಕಿಡಿಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜನ, ಉಚ್ಛಾಟನೆ ಮಾಡಲು ಕಾರಣವೇನು ಎಂದು ಉತ್ತರಿಸಲು ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಕಳೆದ ಎರಡುವರೆ ದಶಕಗಳಿಂದಲೂ ಪಕ್ಷ ಸಂಘಟನೆಯಲ್ಲಿ ನನ್ನದೇ ಪಾತ್ರ ವಹಿಸಿದ್ದೇನೆ. ಇವತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯಲ್ಲಿ ನನ್ನದೂ ಪಾತ್ರವಿದೆ. ಬೇಕಿದ್ದರೆ ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರನ್ನು ಕೇಳಿ ನೋಡಿ ಎಂದರು.
ನನಗೆ ಪಕ್ಷ ವಿರೋಧಿ ಪಟ್ಟಕಟ್ಟಿ ಉಚ್ಛಾಟನೆ ಮಾಡಿರುವುದು ಅಚ್ಚರಿ ಮೂಡಿಸಿದೆ. ನಾನು ಯಾವ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎನ್ನುವುದು ಸ್ಪಷ್ಟ ಪಡಿಸಿ ಅಲ್ಲದೇ ಉಚ್ಛಾಟನೆ ಆದೇಶವನ್ನು ನನಗೆ ಕೊಡದೇ ಮಾಧ್ಯಮಗಳ ಮೂಲಕ ಪ್ರಕಟನೆ ನೀಡಿರುವುದು ಯಾಕೆ ಎಂದು ಪ್ರಶ್ನಿಸಿದರು.
ನಾನು ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ಎಚ್.ಪೂಜಾರ, ಅರುಣ ಶಹಾಪುರ, ಹನಮಂತ ನಿರಾಣಿ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಪಕ್ಷ ವಿರೋಧಿಯೇ? ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ನನ್ನ ವೈಯಕ್ತಿಕ ದುಡ್ಡಿನಲ್ಲಿ ಮನೆ ಮನೆಗೆ ರಾಷ್ಟ್ರಧ್ವಜ ವಿತರಣೆ ಮಾಡಿರುವುದು ಪಕ್ಷ ವಿರೋ ಕೆಲಸವೇ…? ಕಾಶ್ಮೀರ ಫೈಲ್ಸ ಚಿತ್ರವನ್ನು ಬಾಗಲಕೋಟೆ ಜನರಿಗೆ ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ಉಚಿತವಾಗಿ ತೋರಿಸಿದ್ದು ವಿರೋಧಿ ಚಟುವಟಿಕೆಯೇ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಇದು ನನ್ನ ಸವಾಲ್ ಎಂದು ಹೇಳಿದ ಅವರು ಪತ್ರಿಕಾಗೋಷ್ಠಿಯಲ್ಲಿ ಯಾರ ಹೆಸರನ್ನು ಹೇಳದೇ ಪರೋಕ್ಷವಾಗಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ದ ತೀವ್ರ ವಾಗ್ದಾಳಿಯನ್ನು ನಡೆಸಿದರು.

ಹಿರಿಯರ ಮೌನ ಅಚ್ಚರಿ ತಂದಿದೆ :
ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಸಿದ್ದಾಂತದಂತೆ ನಾನು ನಡೆದುಕೊಂಡಿದ್ದೇನೆ. ನಾನೇನಾದರೂ ಪಕ್ಷ ವಿರೋಧಿ ಕೆಲಸ ಮಾಡಿದ್ದರೆ ಅದು ನನ್ನ ಹೆತ್ತ ತಾಯಿಯನ್ನು ವಿರೋಧಿಸಿದಂತೆ. ಹಾಗೆಯೇ ಷಡ್ಯಂತ್ರ ಮಾಡಿ ನನ್ನ ಉಚ್ಛಾಟನೆ ಮಾಡಿದವರು ಪಕ್ಷ ವಿರೋಧಿ ಆಗಿದ್ದರೆ ಅವರು ಹೆತ್ತ ತಾಯಿ ವಿರೋಧಿ ಸಮಾನ ಎಂದು ಭಾವುಕರಾಗಿ ಹೇಳಿದರು.
ಬಾಗಲಕೋಟೆಯಲ್ಲಿ ಬಿಜೆಪಿ ಯಾರಪ್ಪನ ಆಸ್ತಿಯೂ ಅಲ್ಲ. ಯಾರೋ ಒಬ್ಬರ ಮಾತು ಕೇಳಿ ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ದನ್ನು ನೋಡಿದರೆ ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲವೆ? ಬಾಗಲಕೋಟೆ ಬಿಜೆಪಿ ಏನಾದರೂ ದನದ ದವಾಖಾನೆಯೇ ಎಂದು ಖಾರವಾಗಿ ಪ್ರಶ್ನಿಸಿದ ಮಲ್ಲಿಕಾರ್ಜುನ ಚರಂತಿಮಠ, ಈ ಬಗ್ಗೆ ಪಕ್ಷದ ಹಿರಿಯರಾದ ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಅವರ ಪ್ರಶ್ನೆ ಮಾಡದೇ ಇರುವುದು ನಿಜಕ್ಕೂ ನನಗೆ ಆಶ್ಚರ್ಯ ಉಂಟು ಮಾಡಿದೆ. ನನ್ನ ಉಚ್ಛಾಟನೆಗೆ ನಿಖರ ಕಾರಣ ಹೇಳದೇ ಇದ್ದಲ್ಲಿ ಈ ವಿಚಾರವನ್ನು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇನೆ. ಹೀಗಾಗಿ ಎಂಟು ದಿನಗಳಲ್ಲಿ ಜಿಲ್ಲಾ ಅಧ್ಯಕ್ಷ ಶಾಂತಗೌಡರ ನನಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.ಕಟ್ಟಿಗೆ ಹುಳಕ್ಕೆ ಬಗ್ಗಲ್ಲ : ನನ್ನ ಉಚ್ಛಾಟನೆಯಲ್ಲಿ ಪಕ್ಷದಲ್ಲಿ ಇರುವ ಕಟ್ಟಿಗೆ ಹುಳುವೊಂದು ಕೆಲಸ ಮಾಡಿದೆ. ಆ ಹುಳುವಿನ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ. ಅದಕ್ಕೆ ನಾನು ಬಗ್ಗುವವನಲ್ಲ. ನನಗೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಅನಿರೀಕ್ಷಿತ ಘಟನೆ ಆಗಿದೆ. ಇದು ಎಪಿಸೋಡ್ 3 ಮಾತ್ರ. ಎಪಿಸೋಡ್ 1 ಮತ್ತು 2 ರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದ ಎಚ್ಚರಿಸಿದ ಅವರು, ಬಿಜೆಪಿ ಒಡೆದ ಮನೆಯಲ್ಲ. ಅಭಿವೃದ್ದಿ ವಿಚಾರಕ್ಕೆ ಬಂದರೆ ಬಾಗಲಕೋಟೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net