ಉಚಿತ ಪ್ರಯಾಣಕ್ಕೆ ಅವಕಾಶ

7sirsi2
Published on

ಶಿರಸಿ: ಬಸ್​ಪಾಸ್ ವ್ಯವಸ್ಥೆ ಸಮರ್ಪಕ ವಾಗುವವರೆಗೆ ಶಾಲೆ ದಾಖಲಾತಿ ಅಥವಾ ಹಳೆಯ ಬಸ್​ಪಾಸ್ ಆಧಾರದಡಿ ವಿದ್ಯಾರ್ಥಿಗಳ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಬಸ್​ಪಾಸ್ ವಿತರಣೆ ಸಮರ್ಪಕವಾಗಿಲ್ಲ. ಆಧಾರ್ ಕಾರ್ಡ್ ನಂಬರ್ ಜೋಡಣೆ ವಿಚಾರದಲ್ಲಿ ತೀರಾ ವಿಳಂಬವಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಇದಕ್ಕೆ ದನಿಗೂಡಿಸಿದ ಬಿಇಒ ಎಂ.ಎಸ್. ಹೆಗಡೆ, ಶಿರಸಿ-ಹುಬ್ಬಳ್ಳಿ ರಸ್ತೆಯ ಹಲವೆಡೆ ಬಸ್ ನಿಲ್ಲಿಸುತ್ತಿಲ್ಲ. ಹೀಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿ ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಮನೆಗೆ ಕಳುಹಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ನಿತ್ಯವೂ ಇದೇ ರೀತಿಯಾದರೆ ಕಷ್ಟವಾಗುತ್ತದೆ. ಹಾಗಾಗಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಕ್ರಿಯಿಸಿದ ಸಾರಿಗೆ ನಿಗಮ ಶಿರಸಿ ವಿಭಾಗದ ಘಟಕ ವ್ಯವಸ್ಥಾಪಕ ಸರ್ವೆಶ ಆರ್, ಜ. 30ರವರೆಗೆ ಶಾಲೆ ದೃಢೀಕರಣ ಪತ್ರ ಅಥವಾ ಹಳೆಯ ಪಾಸ್ ತೋರಿಸಿದರೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಶ್ರೀಲತಾ ಕಾಳೇರಮನೆ ಮಾತನಾಡಿ, ಆರ್ಥಿಕ ವರ್ಷ ಪೂರ್ಣಗೊಳ್ಳಲು ಮೂರು ತಿಂಗಳು ಬಾಕಿಯಿದ್ದು, ಇಲಾಖೆಗೆ ಮಂಜೂರಾಗಿರುವ ಅನುದಾನ ವಾಪಸು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ವ್ಯಾಕ್ಸಿನ್ ಪ್ರಯೋಗ ಆರಂಭವಾಗಲಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ನಗರದ 5 ಕಡೆ ಸೇರಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಆಯುಷ್ ವೈದ್ಯಾಧಿಕಾರಿ ಜಗದೀಶ ಯಾಜಿ ಮಾತನಾಡಿ, ಆಯುಷ್ ಸೇವಾ ಗ್ರಾಮದಲ್ಲಿ ಜ.11ರಂದು ಔಷಧ ವಿತರಿಸಲು ಕ್ರಮ ವಹಿಸಲಾಗಿದೆ. ಶಿರಸಿಯಲ್ಲಿ ಆಯುರ್ವೆದ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರತಿಕ್ರಿಯಿಸಿದ ಅಧ್ಯಕ್ಷೆ, ಆಸ್ಪತ್ರೆಗೆ ಸೂಕ್ತ ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆ ಸೂಚಿಸಲು ತಾಪಂನಿಂದ ಠರಾವು ಮಾಡಲಾಗುವುದು ಎಂದರು. ತಾಪಂ ಇಒ ಎಫ್.ಜಿ. ಚಿನ್ನಣ್ಣನವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net