ಉಚಿತ ಪ್ರಯಾಣ ದುರ್ಬಳಕೆ ಆಗದಿರಲಿ

5ark-1
Published on

ಅರಕಲಗೂಡು: ಮಹಿಳೆಯರು ಅವಶ್ಯಕತೆ ಇದ್ದರಷ್ಟೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಬೆಳೆಸಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.


ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಶನಿವಾರ ಅರಕಲಗೂಡಿನಿಂದ ಜೋಡಿಗುಬ್ಬಿ-ಬೆಳವಾಡಿ ಮಾರ್ಗ ಮೈಸೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಬಸ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಲು ಉಚಿತ ಸೌಲಭ್ಯ ನೀಡಿದ್ದು ಇದು ದುರ್ಬಳಕೆ ಆಗಬಾರದು ಎಂದು ತಿಳಿಸಿದರು.


ಈ ಭಾಗದ ಜನರ ಬೇಡಿಕೆಯಂತೆ ರಾಮನಾಥಪುರ ಘಟಕದಿಂದ ಅರಕಲಗೂಡು-ಜೋಡಿಗುಬ್ಬಿ-ಬೆಳವಾಡಿ- ಕಾಳೇನಹಳ್ಳಿ ಕೇರಳಾಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಬಸ್‌ಗೆ ಚಾಲನೆ ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಕ್ಷೇತ್ರದಲ್ಲಿ ನನಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ರೈತರು ಬದುಕಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ವಿದ್ಯೆಯಿಂದ ಅಭಿವೃದ್ಧಿಯಾಗುತ್ತದೆ ಎಂದರು.


ಡಿಪೋ ವ್ಯವಸ್ಥಾಪಕ ಹನುಮಂತಪ್ಪ, ದೇವರಾಜು, ಮುಖಂಡರಾದ ಮಗ್ಗೆ ಮಂಜುನಾಥ್, ಆರ್.ನಿಂಗೇಗೌಡ, ಚಂದೀಗೌಡ, ಗೋವಿಂದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net