

ನಾಪೋಕ್ಲು: ಸಮೀಪದ ಐತಿಹಾಸಿಕ ಕರಡ ಪಾಲಂಗಾಲ ಗ್ರಾಮದ ಮಲೆತಿರಿಕೆ ಸನ್ನಿಧಿಯ ಶ್ರೀಮಲೆ ತಂಮ್ರಾನ್ ಈಶ್ವರ ದೇವಾಲಯದ ವಾರ್ಷಿಕೋತ್ಸವ ಭಾನುವಾರ ಸಂಪನ್ನಗೊಂಡಿತು.
ಉತ್ಸವದ ಅಂಗವಾಗಿ ಬೆಳಗ್ಗೆ ಪುರಾತನ ಪದ್ಧತಿಯಂತೆ ಪಟ್ರಪಂಡ ಕುಟುಂಬದ ಜೋಡೆತ್ತಿನ ಎತ್ತುಪೋರಾಟ ಹಾಗೂ ಇತರರಿಂದ ಎತ್ತುಪೋರಾಟ ಹಾಗೂ ಕರಡ ಶ್ರೀಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ಸಂಪ್ರದಾಯದಂತೆ ಸನ್ನಿಧಿಯಲ್ಲಿ ಒಪ್ಪಿಸಿ ಬಳಿಕ ಆಗಮಿಸಿದ ಭಕ್ತರಿಗೆ ಕುಯ್ಯಕೂಳ್ ವಿತರಿಸಲಾಯಿತು.
ಉತ್ಸವದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಸೇವೆ ಅದರಲ್ಲೂ ವಿಶೇಷವಾಗಿ ಗಂಟೆಮಣಿ ಒಪ್ಪಿಸುವುದು, ಇನ್ನಿತರ ಪೂಜೆಗಳನ್ನು ನೆರವೇರಿಸಿದರು.
ಬಳಿಕ ಮಹಾಪೂಜೆ ಮಂಗಳಾರತಿ ಜರುಗಿ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಪಾಯಸ ಸಂತರ್ಪಣೆ ನೆರವೇರಿತು. ಸನ್ನಿಧಿಯ ಮುಖ್ಯ ಅರ್ಚಕ ಪ್ರದೀಪ್ ಇತರರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ, ಉಪ ಅಧ್ಯಕ್ಷ ಪಟ್ರಪಂಡ ಜಗದೀಶ್ ಅಪ್ಪಯ್ಯ, ನಿರ್ದೇಶಕರು, ತಕ್ಕ ಮುಖ್ಯಸ್ಥರು. ಆಡಳಿತ ಮಂಡಳಿಯ ಹಾಲಿ, ಮಾಜಿ ಪದಾಧಿಕಾರಿಗಳು, ಊರಿನ ಹಿರಿಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.